ಭಾರತದಲ್ಲಿ ಅಂತರಿಕ್ಷ ಯೋಜನೆ

ಇಂದು ಭಾರತ ಅಂತರಿಕ್ಷ ಕ್ಷೇತ್ರದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಿರುವ ಕೆಲವೇ ದೇಶಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಅಂತರಿಕ್ಷದಲ್ಲಿ ಮಹತ್ತರವಾದ ಸಾಧನೆಗಳನ್ನು ಮಾಡಿರುವ ರಾಷ್ಟ್ರಗಳ ಪೈಕಿ ಒಂದಾದ ಭಾರತ ಅಭಿವೃದ್ಧಿಶೀಲ ರಾಷ್ಟ್ರವಾಗಿರುವುದು ಮತ್ತು ಭಾರತದ ಅಂತರಿಕ್ಷ ಕಾರ್ಯಕ್ರಮ ಪ್ರಾರಂಭದಿಂದಲೂ ಸಾರ್ವಜನಿಕ ಕ್ಷೇತ್ರದಲ್ಲಿ ಬೆಳೆದು ಬಂದಿರುವುದು ಈ ನಿಟ್ಟಿನಲ್ಲಿ ಒಂದು ವೈಶಿಷ್ಟ್ಯವಾಗಿದೆ.

	ಇಂದು (2006ರ ಪ್ರಾರಂಭದ ಹೊತ್ತಿಗೆ) ಭಾರತ ವೈಜ್ಞಾನಿಕ, ಸಂಪರ್ಕ, ಹವಾಮಾನ ವೀಕ್ಷಣೆ, ದೂರಸಂವೇದನೆ ಮುಂತಾದ ಕ್ಷೇತ್ರಗಳಿಗೆ ಕೊಡುಗೆ ನೀಡುವ ಸಾಮಥ್ರ್ಯವುಳ್ಳ ಯಶಸ್ವಿ 38 ಉಪಗ್ರಹಗಳನ್ನು ಸ್ವತಃ ತಾನೇ ನಿರ್ಮಿಸಿದೆ. ಆ ಪೈಕಿ 17ನ್ನು ಸ್ವದೇಶೀ ಉಪಗ್ರಹ ಉಡ್ಡಯನ ವಾಹನಗಳಾದ ಎಸ್ ಎಲ್ ವಿ - 3, ವಿ ಎಸ್ ಎಲ್, ಪಿ ಎಸ್ ಎಲ್ ವಿ ಹಾಗೂ ಜಿ ಎನ್ ಎಲ್ ವಿ ಗಳಲ್ಲಿ ಉಡಾಯಿಸಿದೆ. ಇದರೊಂದಿಗೆ ನಾಲ್ಕು ವಿದೇಶೀ ಉಪಗ್ರಹಗಳನ್ನು ಭಾರತ ಇಂದು ಭೂಕಕ್ಷೆಗೆ ಯಶಸ್ವಿಯಾಗಿ ಉಡಾಯಿಸಿದೆ. ಭಾರತ ತನ್ನ ಉಪಗ್ರಹಗಳನ್ನು ದೂರಸಂಪರ್ಕ, ದೂರದರ್ಶನ ಪ್ರಸಾರ, ಹವಾಮಾನ ವೀಕ್ಷಣೆ, ಸಂಪನ್ಮೂಲಗಳ ಸಮೀಕ್ಷೆ, ಪ್ರಕೃತಿ ವಿಕೋಪಗಳ ನಿವಾರಣೆ, ದೂರ ಶಿಕ್ಷಣ, ದೂರ ವೈದ್ಯ, ವೈಜ್ಞಾನಿಕ ವೀಕ್ಷಣೆ ಹೀಗೆ ಅನೇಕ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಬಳಸಿಕೊಂಡಿದೆ. ಇಂದು ಶಿಕ್ಷಣ ಕ್ಷೇತ್ರಕ್ಕೆ ಉಪಗ್ರಹವೊಂದನ್ನು ಮುಡಿಪಾಗಿ ಇಟ್ಟಿರುವುದು ಭಾರತವೊಂದೇ.

	ಜಗತ್ತಿನ ರಾಷ್ಟ್ರಗಳ ಪೈಕಿ ಪ್ರಾರಂಭವಾದ ನಂತರದ ಮೂರು ದಶಕಗಳ ಕಾಲ ರಾಷ್ಟ್ರೀಯ ಅಭಿವೃದ್ಧಿಯತ್ತಲೇ ಕೇಂದ್ರೀಕೃತವಾದ ಭಾರತದ ಅಂತರಿಕ್ಷ ಕಾರ್ಯಕ್ರಮಗಳು 1990ರ ದಶಕದಲ್ಲಿ ಅಂತರರಾಷ್ಟ್ರೀಯ ಮಟ್ಟಕ್ಕೆ ಜಿಗಿದು ಅನೇಕ ಬಗೆಯ ಅಂತರಿಕ್ಷ ಸೇವೆಗಳನ್ನು ಜಾಗತಿಕ ಮಟ್ಟದಲ್ಲಿ ವಾಣಿಜ್ಯಾತ್ಮಕವಾಗಿ ಭೌತಿಕವಾಗಿ ನೀಡಲು ಆರಂಭಿಸಿತು. ಹೀಗೆ ಭೂಕಕ್ಷೆಯಲ್ಲಿ ಅನೇಕ ಬಗೆಯ ವಿಷಯಗಳನ್ನು ವಿಧಿಸಿದ ಭಾರತ 21ನೇ ಶತಮಾನದ ಪ್ರಾರಂಭವಾದ ದಶಕದಲ್ಲಿ `ಚಂದ್ರಯಾನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದರ ಅಂಗವಾಗಿ ಪುಟ್ಟ ರೋಬೋಟ್ ನೌಕೆಯೊಂದನ್ನು ಚಂದ್ರನತ್ತ ಉಡಾಯಿಸುವುದರಲ್ಲಿದೆ. ಅಮೆರಿಕವೂ ಸೇರಿದಂತೆ ಅನೇಕ ದೇಶಗಳು ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ. ಇಂದು ಭಾರತ ಅಂತರಿಕ್ಷ ಕಾರ್ಯಕ್ರಮ ಪ್ರಧಾನಮಂತ್ರಿಗಳ ಕಾರ್ಯಾಲಯದಡಿ ಬರುತ್ತದೆ. ಇದಕ್ಕೆ ಪ್ರಧಾನಮಂತ್ರಿ ಕಛೇರಿಯಲ್ಲಿ ಒಬ್ಬ ರಾಜ್ಯಸಚಿವರು ನೋಡಿಕೊಳ್ಳುತ್ತಾರೆ. ಈ ಕಾರ್ಯಕ್ರಮದ ನೀತಿಯನ್ನು ರೂಪಿಸುವುದು `ಅಂತರಿಕ್ಷ ಆಯೋಗ ಎಂಬ ಒಂದು boಜಥಿ. ಈ ಆಯೋಗ ರೂಪಿಸಿದ ನೀತಿಯನ್ನು ಅನುಷ್ಠಾನಕ್ಕೆ ತರುವುದು ಭಾರತ ಸರ್ಕಾರದ ಅಂತರಿಕ್ಷ ಇಲಾಖೆ. ಈ ನಿಟ್ಟಿನಲ್ಲಿ ಅದು ತನ್ನ ಕಾರ್ಯಕ್ರಮ ಅಂಗವಾದ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ `ಇಸ್ರೋ ಅನ್ನು ಅವಲಂಬಿಸುತ್ತದೆ. ಇಂದು ಇಸ್ರೋದೊಂದಿಗೆ ಅಂತರಿಕ್ಷಕ್ಕೆ ಸಂಬಂಧಿಸಿದ ಕೆಲವು ಚಟುವಟಿಕೆಗಳಲ್ಲಿ ತಲ್ಲೀನವಾಗಿರುವ ರಾಷ್ಟ್ರೀಯ ದೂರಸಂವೇದನಾ ಸಂಸ್ಥೆ, ಭೌತಿಕ ಸಂಶೋಧನಾ ಪ್ರಯೋಗಶಾಲೆ ರಾ. ವಾ. ಪ. ಪ್ರ. ಓಂಖಐ `ಈಶಾನ್ಯ ಅಂತರಿಕ್ಷ ಅನ್ವಯಿಕ ಕೇಂದ್ರ ಮುಂತಾದ ಸಂಸ್ಥೆಗಳು ಭಾರತ ಸರ್ಕಾರದ ಅಂತರಿಕ್ಷ ಇಲಾಖೆಯ ವ್ಯಾಪ್ತಿಯಡಿ ಬರುತ್ತವೆ.

	ಭಾರತೀಯ ಅಂತರಿಕ್ಷ ಕಾರ್ಯಕ್ರಮವನ್ನು ಮುನ್ನಡೆಸುವ ಸಂಬಂಧದಲ್ಲಿ ಇಂದು ಮಹತ್ತರವಾದ ಪಾತ್ರ ವಹಿಸುತ್ತಿರುವ ಇಸ್ರೋ ತನ್ನ ಅಂಗಸಂಸ್ಥೆಗಳನ್ನು ಭಾರತದ ವಿವಿಧ ಭಾಗಗಳಲ್ಲಿ ಹೊಂದಿದೆ.

ಆ ಪೈಕಿ ತಿರುವನಂತಪುರ ವಿಕ್ರಂ ಸಾರಾಭಾಯಿ ಅಂತರಿಕ್ಷ ಕೇಂದ್ರ ಉಪಗ್ರಹ ಉಡಾವಣ ವಾಹನಗಳ ಹಾಗೂ `ಸೌಂಡಿಂಗ್ ರಾಕೆಟ್ಟುಗಳ ಅಭಿವೃದ್ಧಿಯಲ್ಲಿ ನಿರತವಾಗಿದೆ. ಅದೇ ನಗರದಲ್ಲಿರುವ ದ್ರವ ಜೋಡಣೆ ವ್ಯವಸ್ಥಾ ಕೇಂದ್ರ ದ್ರವ ನೋದನಕಾರಿಗಳನ್ನು ಹಾಗೂ ಕ್ರಯೋಜನಿಕ (ಅತಿಶೈತ್ಯಕ್ಕೊಳಪಡಿಸಲ್ಪಟ್ಟ ನೋದನಕಾರಿಗಳನ್ನು ಬಳಸುವ) ರಾಕೆಟ್ ಯಂತ್ರಗಳ ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದೆ. ಇದರೊಂದಿಗೇ ತಿರುವನಂತಪುರದಲ್ಲೇ ಇರುವ ಇಸ್ರೋ ಸ್ಥಿತಿಸ್ಥಾಪಕತ್ವ (ಇನರ್ಷಿಯಲ್) ವ್ಯವಸ್ಥಾ ಘಟಕವು ಉಪಗ್ರಹ ಉಡಾವಣಾ ರಾಕೆಟ್‍ಗಳ ಯಾನ ನಿರ್ವಹಣ ನೌಕೆ (ನ್ಯಾ) ವ್ಯವಸ್ಥೆಗೆ ನೆರವಾಗುವ ಸೂಕ್ಷ್ಮ ಜೈರೋಸ್ಕೋಪುಗಳು, ಉಪಗ್ರಹದ ಸೌರಫಲಕಗಳನ್ನು ತಿರುಗಿಸುವ ವ್ಯವಸ್ಥೆಗಳು, ಉಪಗ್ರಹದ ದಿಕ್ಕನ್ನು ನಿಯಂತ್ರಿಸುವಲ್ಲಿ ಹಾಗೂ ಅದಕ್ಕೆ ಸ್ಥಿರತೆಯನ್ನು ನೀಡುವಲ್ಲಿ ಅಗತ್ಯವಾಗುವ ಸಂವೇಗ/ಪ್ರತಿಕ್ರಿಯಾ ಚಕ್ರಗಳ (ಮೊಮೆಂಟಮ್/ರಿಯಾಕ್ಷನ್ ವೀಲ್ಸ್) ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ತಿರುವನಂತಪುರದ ಸಮೀಪದಲ್ಲೇ ಇರುವ ಮಹೇಂದ್ರಗಿರಿಯಲ್ಲಿ ದ್ರವ ಹಾಗೂ ಕ್ರಯೋಜನಿಕ ನೋದನಕಾರಿಗಳನ್ನು ಬಳಸುವ ರಾಕೆಟ್ ವ್ಯವಸ್ಥೆಗಳ ಕೂಲಂಕಷವಾಗಿ ಪರೀಕ್ಷಿಸುವ ಸೌಲಭ್ಯಗಳು ಅಸ್ಥಿತ್ವದಲ್ಲಿವೆ.

	ಭಾರತದ ದಕ್ಷಿಣ ರಾಜ್ಯಗಳಲ್ಲಿ ಒಂದಾದ ಕರ್ನಾಟಕದ ರಾಜಧಾನಿಯಾದ ಬೆಂಗಳೂರನ್ನು ಭಾರತದ ಅಂತರಿಕ್ಷ ನಗರವನ್ನಾಗಿಸಬಹುದು. ಏಕೆಂದರೆ ಭಾರತದ ಅಂತರಿಕ್ಷ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೇಂದ್ರ ಕಛೇರಿಯಿಂದ ಹಿಡಿದು ಉಪಗ್ರಹ ನಿರ್ಮಾಣ ನಿಯಂತ್ರಣ ರಾಕೆಟ್ಟುಗಳ ನಿರ್ಮಾಣ, ಅನ್ವಯೀಕರಣ ಈ ಎಲ್ಲ ಅಂತರಿಕ್ಷದ ಕಾರ್ಯಗಳ ಸಂಬಂಧದಲ್ಲಿನ ಅನೇಕ ಕೇಂದ್ರಗಳು ಬೆಂಗಳೂರಿನಲ್ಲಿವೆ.

	ಆ ಪೈಕಿ ಭಾರತ ಸರ್ಕಾರದ ಅಂತರಿಕ್ಷ ಇಲಾಖೆ ಇಸ್ರೋದ ಮುಖ್ಯ ಕಛೇರಿ ಭಾರತದ ಅಂತರಿಕ್ಷ ಸಾಮಥ್ರ್ಯವನ್ನು ಜಾಗತಿಕ ಮಟ್ಟದಲ್ಲಿ ವಾಣಿಜ್ಯಾತ್ಮಕವಾಗಿ ಮಾರಾಟ ಮಾಡುವ ಅಂತರಿಕ್ಷ ಸಂಸ್ಥೆ ಇವುಗಳು ಬೆಂಗಳೂರು ಉತ್ತರದಲ್ಲಿರುವ ಅಂತರಿಕ್ಷ ಭವನದಲ್ಲಿವೆ. ಉಪಗ್ರಹಗಳ ಅಭಿವೃದ್ಧಿಗೆ ಸಂಬಂಧಿಸಿದ ಬೃಹತ್ ಇಸ್ರೊ ಉಪಗ್ರಹ ಕೇಂದ್ರವೂ ಬೆಂಗಳೂರಿನಲ್ಲಿದೆ. ಇದಕ್ಕೆ ಸ್ವಲ್ಪ ಸಮೀಪದಲ್ಲೇ ದ್ರವ ನೋದನ ವ್ಯವಸ್ಥೆ ಕೇಂದ್ರದ ಒಂದು ಘಟಕ ಸ್ಥಾಪಿಸಲ್ಪಟ್ಟಿದೆ. ದೂರಸಂವೇದಿ ಉಪಗ್ರಹಗಳಿಗೆ ಸಂಬಂಧಿಸಿದಂತೆ ಭೂಮಿಗೆ ಅತಿ ಹತ್ತಿರದ ಕಕ್ಷೆಗಳಲ್ಲಿ ಸುತ್ತುವ ಉಪಗ್ರಹಗಳನ್ನು ನಿಯಂತ್ರಿಸುವ ಇಸ್ರೋ ದೂರಮಾಪನ, ಪಥ ನಿರ್ದೇಶನ ಮತ್ತು -- ಜಾಲದ (ಇಸ್ಟ್ರಿಕ) ಮುಖ್ಯ ಕಛೇರಿ ಹಾಗೂ ಉಪಗ್ರಹ ನಿಯಂತ್ರಣಾ ಕೇಂದ್ರಗಳು ಬೆಂಗಳೂರಿನ ಪೀಣ್ಯ ಕೈಗಾರಿಕಾ ಎಸ್ಟೇಟ್‍ನಲ್ಲಿವೆ. ಅದರ ಸಮೀಪದಲ್ಲೇ ಉಪಗ್ರಹಗಳ ಕಣ್ಣುಗಳಂತಿರುವ ವಿವಿಧ ಬಗೆಯ ಸಂವೇದಕಗಳನ್ನು ನಿರ್ಮಿಸುವ ವಿದ್ಯುತ್ ದೃಕ್ ವ್ಯವಸ್ಥೆಗಳಿಗಾಗಿರುವ ಪ್ರಯೋಗಶಾಲೆಯೂ (ಲಿಯೋಸ್) ಪೀಣ್ಯದಲ್ಲೇ ಇದೆ. ಇನ್ನು ದೂರಸಂವೇದಿ ಉಪಗ್ರಹಗಳಿಂದ ಬರುವ ಚಿತ್ರರೂಪದ ಮಾಹಿತಿಯನ್ನು ದಕ್ಷಿಣ ವಲಯದ ಮಟ್ಟದಲ್ಲಿ ಬಳಸಿಕೊಳ್ಳುವಲ್ಲಿ ನೆರವಾಗುವ `ದಕ್ಷಿಣ ವಲಯದ ದೂರಸಂವೇದನಾ ಸೇವಾ ಕೇಂದ್ರ ಬೆಂಗಳೂರಿನ ದಕ್ಷಿಣದಲ್ಲಿದೆ.

	ಕರ್ನಾಟಕದಲ್ಲಿರುವ ಇಸ್ರೋದ ಮತ್ತೊಂದು ಅಂಗವೇ ಇನ್ಸಾಟ್ ಮುಖ್ಯ ನಿಯಂತ್ರಣಾ ಸೌಲಭ್ಯ (ಎಂಸಿಎಫ್) ಇದು ಹಾಸನದಲ್ಲಿದೆ.
	ಭಾರತದ ಏಕೈಕ ಉಪಗ್ರಹ ಉಡಾವಣ ಕೇಂದ್ರವಾದ ಸತೀಶ್ ಧವನ್ ಅಂತರಿಕ್ಷ ಕೇಂದ್ರವು ಚನ್ನೈನಿಂದ 100 ಕಿ.ಮೀ. ಉತ್ತರಕ್ಕೆ ಭಾರತದ ಆಗ್ನೇಯ, ಕರಾವಳಿಯಲ್ಲಿರುವ ಶ್ರೀಹರಿಕೋಟಾ ದ್ವೀಪದಲ್ಲಿದೆ. ಎರಡು ಅತ್ಯಾಧುನಿಕ ಉಡಾವಣಾ ಕೇಂದ್ರಗಳು, ಉಪಗ್ರಹ ಉಡಾವಣಾ ಜೋಡಣೆ, ಉಪಗ್ರಹ ಪರೀಕ್ಷೆ, ರಾಕೆಟ್‍ನ ಅತ್ಯಾಧುನಿಕ ಸೌಲಭ್ಯಗಳು ಶ್ರೀಹರಿಕೋಟಾದಲ್ಲಿವೆ.

	ಉಪಗ್ರಹಗಳ ವಿವಿಧ ಕಾರ್ಯಗಳಿಗೆ ನೆರವಾಗುವ ಉಪಯುಕ್ತ ಉಪಕರಣಗಳನ್ನು ನಿರ್ಮಿಸುವ ಜವಾಬ್ದಾರಿಯನ್ನು ಅಹ್ಮದಾಬಾದಿನಲ್ಲಿರುವ ಇಸ್ರೋದ ಅಂತರಿಕ್ಷ ಅನ್ವಯಿಕ ಕೇಂದ್ರ (ಸ್ಯಾಕ್) ವಹಿಸಿಕೊಂಡಿದೆ. ಇದೇ ನಗರದಲ್ಲಿ ಭಾರತದ ಅಂತರಿಕ್ಷ ಸಂಶೋಧನೆಯ ತವರಾದ ಭೌತಿಕ ಸಂಶೋಧನಾ ಪ್ರಯೋಗಶಾಲೆಯೂ ಇದೆ. ಉದಯಪುರದಲ್ಲಿರುವ ಸೌರ ವೀಕ್ಷಣಾಲಯವೂ ಇದರಡಿ ಬರುತ್ತದೆ.

	ದೆಹಲಿಯಲ್ಲಿ ಭಾರತದ ಅಂತರಿಕ್ಷ ವಿಭಾಗದ ಶಾಖಾ ಸಚಿವಾಲಯ ಭಾರತದ ರಾಜಧಾನಿಯಾದ ದೆಹಲಿಯಲ್ಲಿದೆ. ಅದೇ ರೀತಿ ಇಸ್ರೋದ ಭಾರತದ ವಾಣಿಜ್ಯ ರಾಜಧಾನಿಯಾದ ಮುಂಬಯಿಯಲ್ಲಿದೆ. ಇಸ್ರೋದ ಅಂಗವಲ್ಲದಿದ್ದರೂ ಭಾರತ ಸರ್ಕಾರದ ಅಂತರಿಕ್ಷ ವಿಭಾಗದ ಅಡಿ ಬರುವ ರಾಷ್ಟ್ರೀಯ ದೂರಸಂವೇದಿ ಸಂಸ್ಥೆ ಹೈದರಾಬಾದಿನಲ್ಲಿದೆ. ದೂರಸಂವೇದಿ ಉಪಗ್ರಹಗಳಿಂದ ರೇಡಿಯೋ ತರಂಗಗಳ ರೂಪದಲ್ಲಿ ಬರುವ ಚಿತ್ರರೂಪದ ಮಾಹಿತಿಯನ್ನು ಪಡೆಯುವ, ಸಂಸ್ಕರಿಸುವ ಹಾಗೂ ಬಳಕೆದಾರರ ಜೊತೆ ವ್ಯವಹರಿಸುವ ಕಾರ್ಯಗಳನ್ನು ಆ ಸಂಸ್ಥೆ ನೋಡಿಕೊಳ್ಳುತ್ತಿದೆ. ಬೆಂಗಳೂರಿನದನ್ನು ಬಿಟ್ಟು ದೂರಸಂವೇದಿ ಉಪಗ್ರಹಗಳಿಂದ ಬಂದ ಮಾಹಿತಿಯನ್ನು ಬಳಸಿಕೊಳ್ಳುವ ಪ್ರಾದೇಶಿಕ ಮಟ್ಟದಲ್ಲಿ ನಾಲ್ಕು ಕೇಂದ್ರಗಳು ಜೋಧ್‍ಪುರ, ಡೆಹ್ರಾಡೂನ್, ಖರಗ್‍ಪುರ ಹಾಗೂ ನಾಗಪುರಗಳಲ್ಲಿವೆ. ಈಶಾನ್ಯ ಭಾರತದಲ್ಲಿ ಅಂತರಿಕ್ಷ ತಂತ್ರಜ್ಞಾನದ ಅನ್ವಯೀಕರಣಕ್ಕಾಗಿ ಈಶಾನ್ಯ ಅಂತರಿಕ್ಷ ಅನ್ವಯಿಕ ಕೇಂದ್ರವನ್ನು ಶಿಲಾಂಗ್‍ನಲ್ಲಿ ಸ್ಥಾಪಿಸಲಾಗಿದೆ. ಇನ್ನೂ ಅತ್ಯಾಧುನಿಕ ಉಪಕರಣಗಳ ನೆರವಿನಿಂದ ಭೂವಾತಾವರಣದ ಅಧ್ಯಯನವನ್ನು ನಡೆಸುವ ಸಲುವಾಗಿ `ರಾಷ್ಟ್ರೀಯ ವಾತಾವರಣ ಸಂಶೋಧನಾ ಪ್ರಯೋಗಶಾಲೆಯನ್ನು ತಿರುಪತಿಯ ಸಮೀಪದ ಗಡಾಂಕಿಯಲ್ಲಿ ಸ್ಥಾಪಿಸಲಾಗಿದೆ.
ಚರಿತ್ರೆ : ಅಂತರಿಕ್ಷವನ್ನು ಕುರಿತ ಭಾರತದ ರಾಷ್ಟ್ರೀಯ ಸಮಿತಿ 1962ರಲ್ಲಿ ಡಾ. ವಿಕ್ರಂ ಸಾರಾಭಾಯಿಯವರ ನೇತೃತ್ವದಲ್ಲಿ ರಚನೆಯಾಗುವುದರೊಂದಿಗೆ ಭಾರತದ ಅಂತರಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮುಂದೆ ಅದು 1963ರ ನವೆಂಬರ್ 21ರಂದು ಕೇರಳದ ಕರಾವಳಿಯಲ್ಲಿನ `ತುಂಬಾ ಭೂಮಧ್ಯರೇಖಾ ರಾಕೆಟ್ ಉಡಾವಣಾ ನೆಲೆಯಿಂದ `ನೈಕೆ-ಅಪ್ಯಾಪೆ ರಾಕೆಟ್ ಒಂದರ ಯಶಸ್ವಿ ಉಡಾವಣೆಯೊಂದಿಗೆ ವಿಧ್ಯುಕ್ತವಾಗಿ ಪ್ರಾರಂಭವಾಯಿತು. ಪ್ರಾರಂಭದ ದಶಕದಲ್ಲಿ ಭಾರತದ ಅಂತರಿಕ್ಷ ಕಾರ್ಯಕ್ರಮ ಬಹುಮಟ್ಟಿಗೆ `ಸೌಂಡಿಂಗ್ (ಸಂಶೋಧನಾ) ರಾಕೆಟ್ಟುಗಳ ನೆರವಿನಿಂದಲೇ ನಡೆಯಿತೆನ್ನಬಹುದು. ಜೊತೆಗೇ ಸೌಂಡಿಂಗ್ ರಾಕೆಟ್‍ಗಳ ನಿರ್ಮಾಣಕ್ಕೆ ಸಂಬಂಧಿಸಿದ ತಂತ್ರಜ್ಞಾನವನ್ನು ಆ ದಶಕದಲ್ಲೇ ಕರಗತ ಮಾಡಿಕೊಳ್ಳಲಾಯಿತು. ಭಾರತದ ಪ್ರಥಮ ಉಪಗ್ರಹ ಸಂಪರ್ಕ ಭೂಕೇಂದ್ರವೊಂದು ಸ್ಥಾಪಿಸಲ್ಪಟ್ಟಿದ್ದು 1960ರ ದಶಕದಲ್ಲೇ. ಇಂದು ಭಾರತ ಹಾಗೂ ವಿಶ್ವಾದ್ಯಂತ ಖ್ಯಾತಿಯನ್ನು ಪಡೆದಿರುವ ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ `ಇಸ್ರೋ 1969ರ ಆಗಸ್ಟ್ 15ರಂದು ಅಸ್ತಿತ್ವಕ್ಕೆ ಬಂದಿತು.

	1970ರ ದಶಕ ಬದಲಾಯಿಸುವಂತೆ ಭಾರತೀಯ ಅಂತರಿಕ್ಷ ಕಾರ್ಯಕ್ರಮದ ವೈವಿಧ್ಯತೆ ಹೆಚ್ಚಿತು. ಭಾರತದ ಮೊದಲ ಉಪಗ್ರಹವಾದ ಆರ್ಯಭಟವು ಸೇರಿದಂತೆ ಅನೇಕ ಪ್ರಯೋಗಾತ್ಮಕವಾದ ಉಪಗ್ರಹಗಳು ಆ ದಶಕದಲ್ಲಿ ನಿರ್ಮಿಸಲ್ಪಟ್ಟವು. ಭಾರತದ ಅಂತರಿಕ್ಷ ಆಯೋಗ ಭಾರತ ಸರ್ಕಾರದ ಅಂತರಿಕ್ಷ ಇಲಾಖೆ ಇವು 1972ರಲ್ಲಿ ಸ್ಥಾಪಿಸಲ್ಪಟ್ಟು `ಇಸ್ರೋ ಸಂಸ್ಥೆ ಅಂತರಿಕ್ಷ ವಿಭಾಗದಡಿ ಬಂದಿತು.

	ಉಪಗ್ರಹ ನಿರ್ಮಾಣಕ್ಕೆ ಸಂಬಂಧಿಸಿದ ಮೂಲಭೂತ ತಂತ್ರಜ್ಞಾನಗಳನ್ನು ಅರಿಯುವ ದೃಷ್ಟಿಯಿಂದ ನಿರ್ಮಿಸಲಾದ 358 ಕಿ.ಗ್ರಾಂ. ತೂಕದ `ಆರ್ಯಭಟ' ವನ್ನು 1975ರ ಏಪ್ರಿಲ್ 19ರಂದು ಸೋವಿಯತ್ ಒಕ್ಕೂಟದ ರಾಕೆಟ್ಟೊಂದರಲ್ಲಿ ಸುಮಾರು 600 ಕಿ.ಗ್ರಾಂ. ಎತ್ತರದ ಕಕ್ಷೆಗೆ ಉಡಾಯಿಸಲಾಯಿತು. ಆ ಬಳಿಕ 1979ರ ಜೂನ್ 7ರಂದು ಭಾರತದ ಮೊದಲ ಪ್ರಾಯೋಗಿಕ ದೂರಸಂವೇದಿ ಉಪಗ್ರಹವಾದ ಭಾಸ್ಕರ-1 ನ್ನು ಸೋವಿಯತ್ ರಾಕೆಟ್ ಒಂದರಲ್ಲೇ ಉಡಾಯಿಸಲಾಯಿತು. ಭಾರತದ ಪ್ರಥಮ ಸ್ವದೇಶಿ ಉಪಗ್ರಹ ಉಡಾವಣಾ ರಾಕೆಟ್ಟಾದ ಎಸ್‍ಎಲ್‍ವಿ-3ನ್ನು ಉಡಾಯಿಸುವ ಪ್ರಯತ್ನವೂ 1979ರಲ್ಲಿ ನಡೆಯಿತು.

	ಸಾಧನೆಯ ದೃಷ್ಟಿಯಿಂದ ಮತ್ತು ಅಂತರಿಕ್ಷ ತಂತ್ರಜ್ಞಾನದ ಉಪಯುಕ್ತತೆಯ ದೃಷ್ಟಿಯಿಂದ 1980ರ ದಶಕ ಭಾರತೀಯ ಅಂತರಿಕ್ಷ ಕಾರ್ಯಕ್ರಮಕ್ಕೆ ಮಹತ್ತರವಾಗಿ ಪರಿಣಮಿಸಿತು. 1980ರ ಜುಲೈ 18ರಂದು ರೋಹಿಣಿ ಆರ್‍ಎಸ್-1 ಉಪಗ್ರಹ ಎಸ್‍ಎಲ್‍ವಿ-3ರಲ್ಲಿ ಯಶಸ್ವಿಯಾಗಿ ದೀರ್ಘವೃತ್ತಾಕಾರದ ಕಕ್ಷೆಯೊಂದನ್ನು ತಲುಪುವುದರೊಂದಿಗೆ ಭಾರತ ಉಪಗ್ರಹವೊಂದನ್ನು ಸ್ವತಃ ತಾನೇ ಉಡಾಯಿಸಿದ ಏಳು ದೇಶಗಳ ಪೈಕಿ ಒಂದಾಯಿತು. 1981ರಲ್ಲಿ ಭಾರತದ ಪ್ರಥಮ ಸಂಪರ್ಕ ಉಪಗ್ರಹವಾದ ಆ್ಯಪಲ್ ಮುಖ್ಯವಾಗಿ ಅರಿಯಾನ್ ರಾಕೆಟ್ ಒಂದರ ನೆರವಿನೊಡನೆ 36,000 ಕಿ.ಮೀ. ಎತ್ತರದ ಭೂಸ್ಥಿರ ಕಕ್ಷೆಯನ್ನು ಸೇರಿತು. 1983ರಲ್ಲಿ ಅಮೆರಿಕಾದ ಅಂತರಿಕ್ಷ ಶಟಲ್‍ನ ನೆರವಿನೊಂದಿಗೆ ಭೂಸ್ಥಿರಕಕ್ಷೆಯನ್ನು ತಲುಪಿದ ಭಾರತದ ರಾಷ್ಟ್ರೀಯ ಉಪಗ್ರಹ ಇನ್ಸಾಟ್-1ಬಿ ಅಲ್ಲಿಂದಲೇ ಭಾರತದ ದೂರಸಂಪರ್ಕ, ದೂರದರ್ಶನ ಪ್ರಸಾರ ಹಾಗೂ ಹವಾಮಾನ ವೀಕ್ಷಣಾ ಕ್ಷೇತ್ರಗಳಿಗೆ ಅಮೂಲ್ಯವಾದ ಸೇವೆ ಸಲ್ಲಿಸುತ್ತಾ ಆ ಕ್ಷೇತ್ರಗಳಲ್ಲಿ ಒಂದು ಮಹತ್ತರವಾದ ಕ್ರಾಂತಿಯನ್ನು ತಂದಿತು. 1988ರ ಮಾರ್ಚ್ 17ರಂದು ಭಾರತದ ಪ್ರಥಮ ದೂರಸಂವೇದಿ ಉಪಗ್ರಹ ಐಆರ್‍ಎಸ್-ಎ ಭೂಕಕ್ಷೆಯನ್ನು ತಲುಪಿ ಕಾರ್ಯಾರಂಭಿಸಿತು. ಆದರೆ ಭಾರತದ ಎರಡನೇ ಪೀಳಿಗೆಯ ಸ್ವದೇಶಿ ರಾಕೆಟ್ಟಾದ ಎಎಸ್‍ಎಲ್‍ವಿ 1980ರ ದಶಕದಲ್ಲಿ ಯಶಸ್ಸನ್ನು ಕಾಣಲಿಲ್ಲ.

	1990ರ ದಶಕ ಉದಯಿಸಿದಂತೆ ದೊಡ್ಡ ಉಪಗ್ರಹಗಳ ಹಾಗೂ ಉಪಗ್ರಹ ಉಡಾವಣಾ ರಾಕೆಟ್ಟುಗಳ ನಿರ್ಮಾಣದ ದೃಷ್ಟಿಯಿಂದ ಭಾರತ ಮಹತ್ತರವಾದ ಸಾಧನೆಗಳನೇಕವನ್ನು ಮಾಡಿತು. ಜೊತೆಗೇ ಉಪಗ್ರಹಗಳು ನೀಡಿರುವ ಸೇವೆಯನ್ನು ಬಳಸಿಕೊಳ್ಳುವ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚಿತು. ಇಷ್ಟೇ ಸಾಲದೆಂಬಂತೆ ಭಾರತದ ಉಪಗ್ರಹಗಳು ನೀಡುವ ಸೇವೆಯನ್ನು ಜಾಗತಿಕ ಮಟ್ಟದಲ್ಲಿ ವಾಣಿಜ್ಯಾತ್ಮಕವಾಗಿ ಒದಗಿಸಲಾರಂಭಿಸಿತು.

	ಮುಂದೆ 21ನೇ ಶತಮಾನ ಉದಯಿಸಿದಂತೆ ಭಾರತದ ನಾಲ್ಕನೇ ಪೀಳಿಗೆಯ ಉಪಗ್ರಹ ಉಡಾವಣಾ ರಾಕೆಟ್ ಜಿಎಸ್‍ಎಲ್‍ವಿ ತನ್ನ ಮೊದಲನೆಯ ಯಾನದಲ್ಲೇ ಯಶಸ್ಸನ್ನು ಕಂಡಿತು. ಇನ್ಸಾಟ್-3 ಹಾಗೂ 4 ನೇ ಸರಣಿಯ ಉಪಗ್ರಹಗಳು ಈಗಾಗಲೇ ಕಕ್ಷೆಗೆ ತೆರಳಿವೆ. ತಾವಿರುವ 600 ಕಿ.ಮೀ.ಗಳಷ್ಟು ದೊಡ್ಡದಾದ ಭೂಸ್ವರೂಪಗಳನ್ನು ಗುರುತಿಸಬಲ್ಲ ರಿಸೋರ್ಸ್‍ಸ್ಯಾಟ್-1 ಮತ್ತು ಕಾರ್ಬೋಸ್ಯಾಟ್-1 ಉಪಗ್ರಹಗಳೆಂದು ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಶಿಕ್ಷಣಕ್ಷೇತ್ರಕ್ಕೆ ಮುಡಿಪಾಗಿಡಲಾದ ಜಗತ್ತಿನ ಏಕೈಕ ಉಪಗ್ರಹ `ಎಜ್ಯುಸ್ಯಾಟ್ ಹಾಗೂ ಕೇವಲ ಹವಾಮಾನ ವೀಕ್ಷಣೆಗಾಗಿಯೇ ನಿರ್ಮಿಸಲ್ಪಟ್ಟ ಕಲ್ಪನಾ-1 ಉಪಗ್ರಹಗಳೂ ಇಂದು (2006ರ ಪ್ರಾರಂಭದಲ್ಲಿ) ಸೇವೆ ಸಲ್ಲಿಸುತ್ತಿವೆ. ಉಪಗ್ರಹಗಳ ನೆರವಿನೊಡನೆ ದೂರವೈದ್ಯ (ಟೆಲಿಮೆಡಿಸಿನ್) ಹಾಗೂ ದೂರಶಿಕ್ಷಣ ಕ್ಷೇತ್ರಗಳಲ್ಲಿ ಭಾರತ ಉತ್ಸಾಹದಿಂದ ಮುನ್ನಡೆಯುತ್ತಿದೆ. ಈ ಎಲ್ಲ ಯಶಸ್ಸುಗಳಿಂದ ಉತ್ತೇಜಿಸಲಾದ ಇಸ್ರೋ ಚಂದ್ರನನ್ನು ಅನ್ವೇಷಿಸುವ ಸಾಹಸವಾದ ಚಂದ್ರಯಾನ-1 ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದರ ಅಂಗವಾಗಿ ಸುಮಾರು 100 ಕಿ.ಗ್ರಾಂ. ತೂಕದ ಪುಟ್ಟ ರೋಬಾಟ್ ಅಂತರಿಕ್ಷ ನೌಕೆಯನ್ನು 2007-08ರ ಸುಮಾರಿನಲ್ಲಿ ಚಂದ್ರನತ್ತ ಕಳುಹಿಸಿ ಅದು ಆ ಆಕಾಶಕಾಯವನ್ನು ಎರಡು ವರ್ಷಗಳ ಕಾಲ ಸುತ್ತುವಂತೆ ಮಾಡಲಾಗುವುದು. ಇದರೊಂದಿಗೆ ಇನ್ನೂ ಹೆಚ್ಚಿನ ಸಾಮಥ್ರ್ಯವುಳ್ಳ ಸಂಪರ್ಕ, ಹವಾಮಾನ ವೀಕ್ಷಣೆ, ದೂರಸಂವೇದನೆ, ಯಾನನಿರ್ವಹಣೆ(ನ್ಯಾವಿಗೇಷನ್) ಹಾಗೂ ವೈಜ್ಞಾನಿಕ ಉಪಗ್ರಹಗಳನ್ನು ಹಾರಿಬಿಡುವ ಉದ್ದೇಶವನ್ನು ಇಸ್ರೋ ಹೊಂದಿದೆ. ರಾಕೆಟ್ ನಿರ್ಮಾಣದ ಸಂಬಂಧದಲ್ಲಿ ಇಂದು ಇಸ್ರೋ ಜಿಎಸ್‍ಎಲ್‍ವಿ ಮೂರನೆಯ ಹಂತವಾದ ಕ್ರಯೋಜನಿಕ್ ಹಂತವನ್ನು ಭಾರತದಲ್ಲೇ ಇಂದು ನಿರ್ಮಿಸುವುದರಲ್ಲಿ ಉತ್ಸಾಹದಿಂದ ಮುಂದುವರೆಯುತ್ತಿದೆ. ಜೊತೆಗೇ ಜಿಎಸ್‍ಎಲ್‍ವಿ ಮಾರ್ಕ್-3 ಎಂಬ ಹೊಸ ಬಗೆಯ ಮತ್ತಷ್ಟು ಶಕ್ತಿಶಾಲಿ ರಾಕೆಟ್‍ನ ನಿರ್ಮಾಣವೂ ಇಂದು ಭರದಿಂದ ಮುಂದೆ ಸಾಗುತ್ತಿದೆ.

ರಾಷ್ಟ್ರೀಯ ಅಂತರಿಕ್ಷ ವ್ಯವಸ್ಥೆಗಳು : 

	ಅಂತರಿಕ ತಂತ್ರಜ್ಞಾನವನ್ನು ರಾಷ್ಟ್ರೀಯ ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸಿಕೊಳ್ಳುವ ಉದ್ದೇಶದಿಂದ ಭಾರತದ ಅಂತರಿಕ್ಷ ಇಲಾಖೆ ನಾಲ್ಕು ರಾಷ್ಟ್ರೀಯ ಅಂತರಿಕ್ಷ ವ್ಯವಸ್ಥೆಗಳನ್ನು ಸ್ಥಾಪಿಸಿದೆ. ಅವೇ ಇನ್ಸಾಟ್, ಐಆರ್‍ಎಸ್, ಪಿಎಸ್‍ಎಲ್‍ವಿ ಮತ್ತು ಜಿಎಸ್‍ಎಲ್‍ವಿ.
ಭಾರತದ ಉಪಗ್ರಹ ತಂತ್ರಜ್ಞಾನದ ಉಗಮ :

	ಭಾರತ ಇಂದು ಉಪಗ್ರಹ ತಂತ್ರಜ್ಞಾನದಲ್ಲಿ ಮಹತ್ತರವಾದ ಸಾಧನೆಗಳನ್ನು ಮಾಡಿರುವ ಕೆಲವೇ ರಾಷ್ಟ್ರಗಳ ಪೈಕಿ ಒಂದು. ಆದರೆ ಭಾರತದ ಉಪಗ್ರಹ ಕಾರ್ಯಕ್ರಮದ ಉಗಮ ಆದದ್ದು ಬೆಂಗಳೂರಿನ ಪೀಣ್ಯ ಕೈಗಾರಿಕಾ ಎಸ್ಟೇಟ್‍ನ ಶೆಡ್‍ಗಳಲ್ಲಿ ಎಂಬುದು ನಮ್ಮಲ್ಲಿ ಅನೇಕರಿಗೆ ಬಹುಶಃ ತಿಳಿದಿರಲಾದುದು. ಅಂತಹ ಒಂದು ಪರಿಸರದಲ್ಲಿ ಪ್ರಾರಂಭವಾಗಿ ಭಾರತದ ಉಪಗ್ರಹ ಕಾರ್ಯಕ್ರಮ ಬೆಂಗಳೂರಿನಲ್ಲೇ ಕಳೆದ ಮೂರೂವರೆ ದಶಕಗಳ ಸುಮಾರಿನಲ್ಲಿ ನಡೆದುಬಂದ ಹಾದಿ ಕುತೂಹಲಕಾರಿಯಾದುದಾಗಿದೆ. ಇಂದು ಉಪಗ್ರಹ ತಂತ್ರಜ್ಞಾನದಲ್ಲಿ ನಮ್ಮ ವಿಜ್ಞಾನಿಗಳು ಸಾಧಿಸಿರುವ ಮುನ್ನಡೆ ಯೂರೋಪ್ ಮತ್ತು ಅಮೆರಿಕಾಗಳನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.

	ಭಾರತದ ಪ್ರಥಮ ಉಪಗ್ರಹದ ನಿರ್ಮಾಣದಲ್ಲಿ ಉಡಾವಣೆಯ ಸಂಬಂಧದಲ್ಲಿ ಒಂದು ಒಪ್ಪಂದ ಹಿಂದಿನ ಸೋವಿಯತ್ ಒಕ್ಕೂಟ ಹಾಗೂ ಭಾರತಗಳ ನಡುವೆ 1972ರಲ್ಲಿ ಏರ್ಪಟ್ಟ ನಂತರ ಆ ಉಪಗ್ರಹ ಕಾರ್ಯಕ್ರಮ ಪ್ರೊಫೆಸರ್ ಉಡಿಪಿ ರಾಮಚಂದ್ರರಾವ್ (ಯು ಆರ್ ರಾವ್) ಅವರ ನೇತೃತ್ವದಲ್ಲಿ ಪ್ರಾರಂಭವಾಯಿತು. ಈ ನಿಟ್ಟಿನಲ್ಲಿ ಅಗತ್ಯವಾದ ಪ್ರಯೋಗಶಾಲೆಗಳನ್ನು ಹಾಗೂ ಸೌಲಭ್ಯಗಳನ್ನು ಸ್ಥಾಪಿಸುವ ನಿರ್ಧಾರ ಕೈಗೊಳ್ಳುವ ವೇಳೆಯಲ್ಲಿ ಬೆಂಗಳೂರು ಬಹಳ ಅನುಕೂಲಕರವಾಗಿ ಪರಿಣಮಿಸಿತು. ಏಕೆಂದರೆ ಇಲ್ಲಿ ಆ ವೇಳೆಗಾಗಲೇ ಅನೇಕ ಭಾರಿ ಕೈಗಾರಿಕೆಗಳು ಅದರಲ್ಲೂ ಮೆಕ್ಯಾನಿಕಲ್ ಇಂಜಿನಿಯರಿಂಗ್, ವಿಮಾನ ನಿರ್ಮಾಣ, ಭಾರಿ ಮೆಷೀನುಗಳು, ಎಲೆಕ್ಟ್ರಾನಿಕ್ಸ್ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದ ಕೈಗಾರಿಕೆಗಳು ಇಲ್ಲಿ ಅಸ್ತಿತ್ವದಲ್ಲಿದ್ದವು. ಜೊತೆಗೇ ಭಾರತೀಯ ವಿಜ್ಞಾನ ಮಂದಿರದಂತಹ ವಿದ್ವತ್ ಸಂಸ್ಥೆಗಳೂ ಇದೇ ನಗರದಲ್ಲಿದ್ದವು. ಇಷ್ಟೇ ಅಲ್ಲದೇ ಸಾರಿಗೆ, ಹವಾಮಾನ, ರಾಜ್ಯ ಸರ್ಕಾರದ ಉತ್ತೇಜನ ಮುಂತಾದ ಅಂಶಗಳೂ ಬೆಂಗಳೂರಿನಲ್ಲಿ ಭಾರತದ ಮೊದಲ ಉಪಗ್ರಹ ನಿರ್ಮಾಣ ಪ್ರಾರಂಭಿಸಲಾಗುವುದಕ್ಕೆ ಕಾರಣವಾದವು.

	ಮೊದಲಿಗೆ ಇದು ಇಂಡೋ-ಸೋವಿಯತ್ ಉಪಗ್ರಹ ಯೋಜನೆ (ಇಂಡೋಸೋವಿಯತ್ ಸ್ಯಾಟ್‍ಲೈಟ್ ಪ್ರಾಜೆಕ್ಟ್) ಎಂಬ ಹೆಸರಿನಲ್ಲಿ ಪ್ರಾರಂಭವಾಯಿತು. ಈ ಕಾರ್ಯಕ್ರಮದ ನೇತೃತ್ವವನ್ನು ಅಹಮದಾಬಾದಿನ ಭೌತಿಕ ಸಂಶೋಧನಾ ಪ್ರಯೋಗಶಾಲೆಯಲ್ಲಿ (ಪಿಆರ್‍ಎಲ್) ಪ್ರಾಧ್ಯಾಪಕರಾಗಿದ್ದ ಹಾಗೂ ತಿರುವನಂತಪುರದ ವಿಕ್ರಂ ಸಾರಾಭಾಯಿ ಅಂತರಿಕ್ಷ ಕೇಂದ್ರದ ಉಪಗ್ರಹ ವ್ಯವಸ್ಥಾ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಯು ಆರ್ ರಾವ್ ಅವರು ವಹಿಸಿದರು. ಮೊದಲಿಗೆ ಅದರ ಕಛೇರಿ ಭಾರತೀಯ ವಿಜ್ಞಾನ ಮಂದಿರದ ಆವರಣದಲ್ಲಿದ್ದ ಒಂದು ಪ್ರವಾಸ ಕಟ್ಟಡದಲ್ಲಿತ್ತು. ಆಗತಾನೇ ಪಿಎಚ್‍ಡಿ ಪದವಿ ಪಡೆದ ಕೆಲವು ಯುವ ವಿಜ್ಞಾನಿಗಳನ್ನು ಆ ಸಂಸ್ಥೆಯಿಂದಲೇ ನೇರವಾಗಿ ಭಾರತದ ಮೊದಲ ಉಪಗ್ರಹ ನಿರ್ಮಾಣ ಕಾರ್ಯಕ್ರಮಕ್ಕೆ ಆಯ್ಕೆಮಾಡಿಕೊಳ್ಳಲಾಯಿತು. ಮುಂದೆ ಅವರು ಉಪಗ್ರಹ ತಂತ್ರಜ್ಞಾನದ ಬೆಳವಣಿಗೆಯಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದಿದು ಚರಿತ್ರೆ. ಕೆಲಕಾಲದ ನಂತರ ಒಂದರಿಂದ ಒಂದು ಸಾಕಷ್ಟು ದೂರದಲ್ಲಿದ್ದ ಕೈಗಾರಿಕಾ ಶೆಡ್‍ಗಳನ್ನು ಅಂದು ಬೆಂಗಳೂರು ಹೊರಗಿದ್ದ ಪೀಣ್ಯ ಕೈಗಾರಿಕಾ ಎಸ್ಟೇಟ್‍ನಲ್ಲಿ ಕೊಂಡು ಅವುಗಳಲ್ಲಿ ಉಪಗ್ರಹ ನಿರ್ಮಾಣಕ್ಕೆ ಸಂಬಂಧಿಸಿದ ಒಂದೊಂದೇ ಸೌಲಭ್ಯವನ್ನು ಸ್ಥಾಪಿಸುವುದನ್ನು ಪ್ರಾರಂಭಿಸಲಾಯಿತು.
ಇನ್ಸಾಟ್ : ಇನ್ಸಾಟ್ ಎಂಬುದು `ಇಂಡಿಯನ್ ನ್ಯಾಷನಲ್ ಸ್ಯಾಟಲೈಟ್ ಎಂಬ ಪದ ಸಮೂಹದ ಹೃಸ್ವರೂಪ. ಕನ್ನಡದಲ್ಲಿ ಇದನ್ನು ಭಾರತೀಯ ರಾಷ್ಟ್ರೀಯ ಉಪಗ್ರಹ ಎಂದು ಅರ್ಥೈಸಬಹುದು. ಇಂದು 2006ರ ಪ್ರಾರಂಭದಲ್ಲಿ ಇನ್ಸಾಟ್ ವ್ಯವಸ್ಥೆಯಲ್ಲಿ ಒಂಬತ್ತು ಉಪಗ್ರಹಗಳು ಕಾರ್ಯನಿರ್ವಹಿಸುತ್ತಿವೆ. ಅವೇ ಇನ್ಸಾಟ್-2ಇ, ಇನ್ಸಾಟ್-3ಎ, ಇನ್ಸಾಟ್-3ಬಿ, ಇನ್ಸಾಟ್-3ಸಿ, ಇನ್ಸಾಟ್-3ಇ, ಕಲ್ಪನಾ-1, ಜಿಸ್ಯಾಟ್-2, ಎಜ್ಯುಸ್ಯಾಟ್ ಮತ್ತು ಇನ್ಸಾಟ್-4ಎ, ಈ ಉಪಗ್ರಹಗಳ ಪೈಕಿ ಕೆಲವು ಸಂಪರ್ಕ ಹಾಗೂ ಹವಾಮಾನ ವೀಕ್ಷಣಾ ಕ್ಷೇತ್ರ ಇವೆರಡಕ್ಕೂ ಸೇವೆ ಸಲ್ಲಿಸುತ್ತಿವೆ. ಕಲ್ಪನಾ-1 ಕೇವಲ ಹವಾಮಾನ ವೀಕ್ಷಣಾ ಕ್ಷೇತ್ರಕ್ಕೆ ಮಾತ್ರ ಸೇವೆ ಸಲ್ಲಿಸುತ್ತಿರುವ ಉಪಗ್ರಹವಾಗಿದೆ. ಉಡಾವಣೆಯ ವೇಳೆಯಲ್ಲಿ ಮೆಟ್‍ಸ್ಯಾಟ್ ಎಂಬ ಹೆಸರಿದ್ದ ಈ ಉಪಗ್ರಹ ತನ್ನ ಕಕ್ಷಾಗೃಹವನ್ನು ತಲುಪಿ ಕಾರ್ಯನಿರ್ವಹಣೆಯನ್ನು ಆರಂಭಿಸಿದ ನಂತರ ಅದಕ್ಕೆ 2003ರ ಫೆಬ್ರವರಿ 1 ರಂದು ಜರುಗಿದ ಕೊಲಂಬಿಯಾ ಶೆಟಲ್ ಅಫಘಾತದಲ್ಲಿ ಮಡಿದ ಭಾರತೀಯ ಸಂಜಾತೆ `ನಾಸಾ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರನ್ನು ಇಡಲಾಯಿತು.

	ಇನ್ಸಾಟ್ ವ್ಯವಸ್ಥೆಯ ಉಪಗ್ರಹಗಳು ಭೂಮಿಯಿಂದ ಮೂವತ್ತಾರು ಸಾವಿರ ಕಿ.ಮೀ. ಎತ್ತರದಲ್ಲಿ ಭೂಮಧ್ಯ ರೇಖೆಯ ಮೇಲಿರುವ ಭೂಸ್ಥಿರ ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅವುಗಳ ಪೈಕಿ ಅನೇಕವನ್ನು ಯೂರೋಪಿನ ಅರಿಯಾನ್ ರಾಕೆಟ್ಟುಗಳು ಉಡಾಯಿಸಿವೆ. ಮತ್ತೆ ಕೆಲವನ್ನು ಅಮೆರಿಕದ ಡೆಲ್ಟಾ ರಾಕೆಟ್ಟುಗಳು ಉಡಾಯಿಸಿವೆ. ಇನ್ಸಾಟ್-1ಬಿ ಉಪಗ್ರಹ ಅಮೆರಿಕಾದ ಅಂತರಿಕ್ಷ ಶಟಲ್‍ನಲ್ಲಿ ಉಡಾಯಿಸಲಾದ ಏಕೈಕ ಭಾರತೀಯ ಉಪಗ್ರಹವಾಗಿದೆ. 2001 ರಿಂದ ಇತ್ತೀಚೆಗೆ ಭಾರತೀಯ ರಾಕೆಟ್ಟುಗಳಾದ ಪಿಎಸ್‍ಎಲ್‍ವಿ ಮತ್ತು ಜಿಎಸ್‍ಎಲ್‍ವಿ ಇನ್ಸಾಟ್ ಕಾರ್ಯಕ್ರಮದ ಕೆಲವು ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಯತ್ತ ಹಾರಿಬಿಟ್ಟಿವೆ.

	ದೂರಸಂಪರ್ಕ, ದೂರದರ್ಶನ ಪ್ರಸಾರ ಹಾಗೂ ಹವಾಮಾನ ವೀಕ್ಷಣಾ ಕಾರ್ಯಗಳಿಗೆ ಉಪಗ್ರಹಗಳನ್ನು ಬಳಸಿಕೊಳ್ಳುವ ಮೂಲಕ ಆ ಕ್ಷೇತ್ರಗಳಲ್ಲಿ ತ್ವರಿತವಾದ ಮುನ್ನಡೆಯನ್ನು ತರುವ ದೃಷ್ಟಿಯಿಂದ ಇನ್ಸಾಟ್ ಉಪಗ್ರಹ ವ್ಯವಸ್ಥೆಯನ್ನು ರೂಪಿಸಲಾಯಿತು.

	ಈ ನಿಟ್ಟಿನಲ್ಲಿ ಮೊದಲಿಗೆ ಇನ್ಸಾಟ್-1 ಸರಣಿಯ ಉಪಗ್ರಹಗಳನ್ನು ಅಮೆರಿಕದ ಫೋರ್ಡ್ ಏರೋಸ್ಪೇಸ್ ಸಂಸ್ಥೆಯಿಂದ ಕೊಳ್ಳಲಾಯಿತು. ಆದರೆ ಮುಂದಿನ ಇನ್ಸಾಟ್-2 ಸರಣಿಯಿಂದ ಮೊದಲುಗೊಂಡು ಇನ್ಸಾಟ್ ಉಪಗ್ರಹಗಳನ್ನು ಭಾರತದಲ್ಲೇ ನಿರ್ಮಿಸುವುದು ಪ್ರಾರಂಭಿಸಲಾಯಿತು. ಇನ್ಸಾಟ್-2 ಉಪಗ್ರಹಗಳು ಹಿಂದಿನ ಇನ್ಸಾಟ್-1 ಉಪಗ್ರಹಗಳಿಗಿಂತ ಎರಡು ಪಟ್ಟು ತೂಕವಿದ್ದು ಸುಮಾರು ಒಂದೂವರೆ ಪಟ್ಟು ಹೆಚ್ಚಿನ ಸೇವೆ ಸಾಮಥ್ರ್ಯವನ್ನು ಹೊಂದಿದ್ದವು. ಆ ಪೈಕಿ ಮೊದಲ ಎರಡು ಉಪಗ್ರಹಗಳು ಹಿಂದಿನ ಇನ್ಸಾಟ್-1 ರಂತೇ ದೂರಸಂಪರ್ಕ, ದೂರದರ್ಶನ ಪ್ರಸಾರ ಹಾಗೂ ಹವಾಮಾನ ವೀಕ್ಷಣಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಸೇವೆ ಸಲ್ಲಿಸುವ ಸಾಮಥ್ರ್ಯವನ್ನು ಹೊಂದಿದ್ದರೆ, ಮುಂದಿನ ಎರಡು ಉಪಗ್ರಹಗಳು ಕೇವಲ ಸಂಪರ್ಕ ಉಪಗ್ರಹಗಳಾಗಿದ್ದವು. ಇನ್ಸಾಟ್-2 ಸರಣಿಯ ಮೊದಲ ಎರಡು ಉಪಗ್ರಹಗಳನ್ನೇ ಹೋಲುತ್ತಿತ್ತು. ಮುಂದೆ 2000 ದಿಂದ 2003ರ ಅವಧಿಯಲ್ಲಿ ನಾಲ್ಕು ಇನ್ಸಾಟ್-3 ಸರಣಿಯ ಉಪಗ್ರಹಗಳನ್ನು ಉಡಾಯಿಸಲಾಯಿತು. ಆ ಪೈಕಿ ಮೂರು ಕೇವಲ ಸಂಪರ್ಕ ಉಪಗ್ರಹಗಳಾಗಿದ್ದರೆ ಒಂದು (ಇನ್ಸಾಟ್-3ಎ) ಹಿಂದಿನ ಇನ್ಸಾಟ್-1 ಸರಣಿಯ ನಾಲ್ಕು ಉಪಗ್ರಹಗಳು, ಇನ್ಸಾಟ್-2ಎ, ಇನ್ಸಾಟ್-2ಬಿ ಹಾಗೂ ಇನ್ಸಾಟ್-2ಇ ಗಳಂತೆ ವಿವಿಧೋದ್ದೇಶ ಉಪಗ್ರಹವಾಗಿದೆ. ಇತ್ತೀಚೆಗೆ (ಅಂದರೆ 2005ರ ಡಿಸೆಂಬರ್‍ನಲ್ಲಿ) ಇನ್ಸಾಟ್-4 ಸರಣಿಯ ಮೊದಲ ಉಪಗ್ರಹ ತನ್ನ ಕಕ್ಷಾಗೃಹಕ್ಕೆ ತೆರಳಿದೆ. ಇಂದು ಕಾರ್ಯ ನಿರ್ವಹಿಸುತ್ತಿರುವ ಇನ್ಸಾಟ್ ಉಪಗ್ರಹಗಳು ಪೈಕಿ ಜಿಸ್ಯಾಟ್-2, ಜಿಸ್ಯಾಟ್-3 ಗಳನ್ನು ಜಿಎಸ್‍ಎಲ್‍ವಿ ರಾಕೆಟ್ಟು ಉಡಾಯಿಸಿದ್ದಾರೆ. ಕಲ್ಪನಾ-1 ನ್ನು ಪಿಎಸ್‍ಎಲ್‍ವಿ ಉಡಾಯಿಸಿದೆ.

	1980ರ ದಶಕದಲ್ಲಿ ಭಾರತದ ದೂರಸಂಪರ್ಕ, ದೂರದರ್ಶನ ಪ್ರಸಾರ ಹಾಗೂ ಹವಾಮಾನ ವೀಕ್ಷಣಾ ಕ್ಷೇತ್ರಗಳಲ್ಲಿ ಕ್ರಾಂತಿಕಾರಕವಾದ ಮುನ್ನಡೆಯನ್ನು ತಂದ ಇನ್ಸಾಟ್ ವ್ಯವಸ್ಥೆಯ ಉಪಗ್ರಹಗಳು ಇಂದು ಭಾರತದ ಅನೇಕ ಕ್ಷೇತ್ರಗಳ, ಅದರಲ್ಲೂ ದೂರದರ್ಶನ ಪ್ರಸಾರದ ಬೆನ್ನೆಲುಬಾಗಿವೆ.

	ನಮ್ಮ ದೂರಸಂಪರ್ಕ ಕ್ಷೇತ್ರದಲ್ಲಿಂದು ಇನ್ಸಾಟ್ ಉಪಗ್ರಹಗಳನ್ನು ದೊಡ್ಡ ನಗರಗಳನ್ನು ಜೋಡಿಸುವ `ಟ್ರಂಕ್ -- (ರೂಟ್)ಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಇತ್ತೀಚಿನ ವರ್ಷಗಳಿಂದ `ವಿಸ್ಯಾಟ್ ಗಳೆಂದು ಪುಟ್ಟ ಉಪಗ್ರಹ ಆ್ಯಂಟನಾಗಳು ಬಳಕೆಗೆ ಬಂದಿರುವುದರಿಂದ ಅನೇಕ ಬಗೆಯ ಬಳಕೆದಾರರು ಇನ್ಸಾಟ್ ಉಪಗ್ರಹಗಳ ಮೂಲಕ ನೇರವಾಗಿ ಒಬ್ಬರೊಡನೆ ಒಬ್ಬರು ವ್ಯವಹರಿಸುವುದು ಸಾಧ್ಯವಾಗಿದೆ. ಶೇರುಪೇಟೆಯೂ ಸೇರಿದಂತೆ ಅನೇಕ ವಾಣಿಜ್ಯ ಸಂಸ್ಥೆಗಳು ಇವರ ಮೇಲೆಯೇ ಅವಲಂಬಿತವಾಗಿವೆ.

	ಅದೇ ರೀತಿ ಇಂದು ಡಜûನ್‍ಗಟ್ಟಲೆ ದೂರದರ್ಶನದ ಛಾನಲ್‍ಗಳು ಅದರಲ್ಲೂ, ಪ್ರಾದೇಶಿಕ ಭಾಷೆಯ ಛಾನಲ್‍ಗಳು ಇನ್ಸಾಟ್ ಉಪಗ್ರಹಗಳ ಮೂಲಕ ಪ್ರಸಾರವಾಗುತ್ತಿವೆ. ಇದರೊಂದಿಗೇ ಅನೇಕ ಖಾಸಗೀ ಛಾನಲ್‍ಗಳನ್ನು ಇನ್ಸಾಟ್ ಉಪಗ್ರಹಗಳಿಂದು ಪ್ರಸಾರ ಮಾಡುತ್ತಿವೆ. ಡೈರೆಕ್ಟ್ ಟು ಹೋಂ (ಡಿಟಿಎಚ್) ತಂತ್ರಜ್ಞಾನ, ಅಂದರ ಉಪಗ್ರಹದಿಂದ ಪ್ರಸಾರವಾದ ಕಾರ್ಯಕ್ರಮಗಳನ್ನು ಗೃಹಬಳಕೆಯ ಟಿವಿಯೊಂದು ನೇರವಾಗಿ ಪಡೆಯುವುದನ್ನು ಸಾಧ್ಯ ಮಡುವ ತಂತ್ರಜ್ಞಾನ ಇಂದು ಬಳಕೆಗೆ ಬಂದಿದೆ. ಇತ್ತೀಚಿನದಾದ ಇನ್ಸಾಟ್-4ಎ ಉಪಗ್ರಹ ನೂರಕ್ಕೂ ಹೆಚ್ಚು ಛಾನಲ್‍ಗಳನ್ನು ಡಿಟಿಎಚ್ ತಂತ್ರಜ್ಞಾನದ ಮೂಲಕ ಪ್ರಸಾರ ಮಾಡುವ ಸಾಮಥ್ರ್ಯವನ್ನು ಹೊಂದಿದೆ. ಅಂತೂ ಭಾರತದ ಮನರಂಜನಾ ಕ್ಷೇತ್ರದ ದಿಢೀರ್ ವಿಕಾಸದಲ್ಲಿ ಇನ್ಸಾಟ್ ಉಪಗ್ರಹಗಳು ಮಹತ್ತರವಾದ ಕೊಡುಗೆಯನ್ನು ನೀಡಿವೆ.

ಐಆರ್‍ಎಸ್ ವ್ಯವಸ್ಥೆ : 

	ಭಾರತದ ಸಂಪನ್ಮೂಲಗಳನ್ನು ಕ್ರಮಬದ್ಧವಾಗಿ ಸಮೀಕ್ಷೆ ಮಾಡುವ ಮೂಲಕ ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಐಆರ್‍ಎಸ್ ಕಾರ್ಯಕ್ರಮವನ್ನು ರೂಪಿಸಲಾಯಿತು. ಇಂದು ಆ ಕಾರ್ಯಕ್ರಮದ ಆರು ಉಪಗ್ರಹಗಳು-ಐಆರ್‍ಎಸ್-1ಸಿ, ಐಆರ್‍ಎಸ್-1ಡಿ, ಐಆರ್‍ಎಸ್-ಪಿ4 (ಜಷನ್ ಸ್ಯಾಟ್-1) ಟಿಇಎಸ್, ರಿಸೋರ್ಸ್ ಸ್ಯಾಟ್-1 ಮತ್ತು ಕಾರ್ಬೋಸ್ಯಾಟ್-1 ಕಕ್ಷೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಆ ಪೈಕಿ ಕೆಲವು ಭಾರತಕ್ಕೊಂದೇ ಅಲ್ಲದೇ ಜಾಗತಿಕ ಮಟ್ಟದಲ್ಲೂ ಸೇವೆ ಸಲ್ಲಿಸುತ್ತಿವೆ. ನಮ್ಮ ಐಆರ್‍ಎಸ್ ಉಪಗ್ರಹಗಳಿಂದ ರೇಡಿಯೋ ತರಂಗಗಳ ರೂಪದಲ್ಲಿ ಬರುವ ಚಿತ್ರರೂಪದ ಮಾಹಿತಿಯನ್ನು ಪಡೆಯುವ ಭೂಕೇಂದ್ರಗಳು ಜಗತ್ತಿನ ವಿವಿದೆಡೆಯಲ್ಲಿಂದು ಅಸ್ತಿತ್ವದಲ್ಲಿವೆ. ಉಪಗ್ರಹಾಧಾರಿತ ದೂರಸಂವೇದನಾ (ರಿಮೋಟ್ ಸೆನ್ಸಿಂಗ್) ಕ್ಷೇತ್ರದಲ್ಲಿಂದು ಭಾರತ ಮುಂಚೂಣಿಯಲ್ಲಿದೆ.

	1972 ರಿಂದ 1976ರ ಅವಧಿಯಲ್ಲಿ ವಿಶೇಷ ಕ್ಯಾಮೆರಾಗಳನ್ನು ವಿಮಾನ ಹಾಗೂ ಹೆಲಿಕಾಪ್ಟರ್‍ಗಳಲ್ಲಿ ಕೊಂಡೊಯ್ಯುವ ಮೂಲಕ ದೂರಸಂವೇದನೆ ಅಂದರೆ ವಸ್ತು ಅಥವಾ ಘಟನೆಯೊಂದನ್ನು ಭೌತಿಕವಾಗಿ ಸಂಪರ್ಕಿಸದೇ ದೂರದಿಂದಲೇ ವೀಕ್ಷಿಸುವ ಕಾರ್ಯದ ಸಂಬಂಧದಲ್ಲಿ ಉಪಯುಕ್ತವಾದ ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಲಾಯಿತು. ಆ ಬಳಿಕ 1978ರಲ್ಲಿ ಅಮೆರಿಕದ ದೂರಸಂವೇದಿ ಉಪಗ್ರಹ ಲ್ಯಾಂಡ್‍ಸ್ಯಾಟ್‍ನಿಂದ ಬರುವ ಚಿತ್ರರೂಪದ ಮಾಹಿತಿಯನ್ನು ಪಡೆಯಬಲ್ಲ ಭೂಕೇಂದ್ರವನ್ನು ಹೈದರಾಬಾದಿನ ಸಮೀಪದಲ್ಲಿ ಸ್ಥಾಪಿಸಲಾಯಿತು. ಮುಂದೆ 1979 ಹಾಗೂ 1981ರಲ್ಲಿ ಭಾಸ್ಕರ-1 ಮತ್ತು ಭಾಸ್ಕರ-2 ಎಂಬ ಎರಡು ಪ್ರಾಯೋಗಿಕ ದೂರಸಂವೇದಿ ಉಪಗ್ರಹಗಳು ಕ್ರಮವಾಗಿ ಉಡಾಯಿಸಲ್ಪಟ್ಟವು. ಇದಾದ ಬಳಿಕ 1988ರ ಮಾರ್ಚ್ 17ರಂದು ಭಾರತದ ಮೊದಲ ಕಾರ್ಯವಾಗಿ (ಆಪರೇಷನಲ್) ದೂರಸಂವೇದಿ ಉಪಗ್ರಹ ಐಆರ್‍ಎಸ್-1ಎ ಯಶಸ್ವಿಯಾಗಿ ಕಕ್ಷೆಗೆ ತೆರಳುವುದರೊಂದಿಗೆ ಒಂದು ಹೊಸ ಶಕೆ ಆರಂಭವಾಯಿತು. ಅದಾದ ನಂತರ 1991ರಲ್ಲಿ ಕಕ್ಷೆಗೆ ತೆರಳಿದ ಐಆರ್‍ಎಸ್-1ಬಿ ಹಿಂದಿನ ಉಪಗ್ರಹದ ಸೇವೆಯನ್ನು ಮುಂದುವರೆಸಿತು. 1994ರ ಅಕ್ಟೋಬರ್ 15ರಂದು ಉಡಾಯಿಸಲ್ಪಟ್ಟ ಐಆರ್‍ಎಸ್-ಪಿ2 ಉಪಗ್ರಹ ಭಾರತದ ರಾಕೆಟ್‍ನಲ್ಲೇ ಭೂಕಕ್ಷೆಗೆ ತೆರಳಿದ ಮೊದಲ ಐಆರ್‍ಎಸ್ ಉಪಗ್ರಹವಾಯಿತು.

	1995 ಹಾಗೂ 1997ರಲ್ಲಿ ಕಕ್ಷೆಗೆ ತೆರಳಿದ ಐಆರ್‍ಎಸ್-1ಸಿ ಹಾಗೂ 1ಡಿ ಉಪಗ್ರಹಗಳು ಹೆಚ್ಚಿನ ಸಾಮಥ್ರ್ಯವನ್ನು ಉಳ್ಳ ಭಾರತದ ಎರಡನೇ ಪೀಳಿಗೆಯ ದೂರಸಂವೇದಿ ಉಪಗ್ರಹಗಳಾಗಿವೆ. ಅತ್ಯಂತ ಚುರುಕಾದ ದೃಷ್ಟಿಯುಳ್ಳ ಕ್ಯಾಮೆರಾ, ಮಧ್ಯಮ ಮಟ್ಟದ ಚುರುಕುಳ್ಳ ದೃಷ್ಟಿಯ ಕ್ಯಾಮೆರಾ, ಕಡಿಮೆ ಚುರುಕಿನ ದೃಷ್ಟಿಯಿದ್ದರೂ ವಿಶಾಲವಾದ ವ್ಯಾಪ್ತಿಯ ಭೂಪ್ರದೇಶಗಳನ್ನು ಏಕಕಾಲದಲ್ಲಿ ವೀಕ್ಷಿಸಬಲ್ಲ ಕ್ಯಾಮೆರಾ ಈ ಮೂರನ್ನೂ ಹೊಂದಿರುವ ವೈಶಿಷ್ಟ್ಯ ಆ ಉಪಗ್ರಹಗಳಿಗಿದೆ. ಇದಾದ ನಂತರ 1999ರಲ್ಲಿ ಉಡಾಯಿಸಲಾದ `ಓಷನ್‍ಸ್ಯಾಟ್ (ಐಆರ್‍ಎಸ್-ಪಿ4) ಸಾಗರಗಳನ್ನು ಹಾಗೂ ವಾತಾವರಣ ವೀಕಣೆಯ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹೊಂದಿದೆ. ಆ ಬಳಿಕ 2001ರಲ್ಲಿ ಉಡಾಯಿಸಲಾದ ತಂತ್ರಜ್ಞಾನ ಪ್ರಾಯೋಗಿಕ ಉಪಗ್ರಹ (ಟಿಇಎಸ್) ತಾನಿದ್ದ 560 ಕಿ.ಮೀ. ಎತ್ತರದಿಂದಲೇ ಕೇವಲ ಮೂರು ಅಡಿಯಷ್ಟು ಇಂದಿನ ಭೂಸ್ವರೂಪಗಳನ್ನು ಗುರುತಿಸಬಲ್ಲದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಉಡಾಯಿಸಲಾಗಿರುವ ಎರಡು ಭಾರತೀಯ ದೂರಸಂವೇದಿ ಉಪಗ್ರಹಗಳ ಪೈಕಿ ರಿಸೋರ್ಸ್‍ಸ್ಯಾಟ್-1 ಹಿಂದಿನ ಟಿಆರ್‍ಎಸ್-1ಸಿ ಹಾಗೂ 1ಡಿ ಯವನ್ನೇ ಹೋಲುವ ಆದರೆ ಇನ್ನೂ ಹೆಚ್ಚಿನ ಸಾಮಥ್ರ್ಯವುಳ್ಳ ಮೂರು ಕ್ಯಾಮೆರಾಗಳನ್ನು ಹೊಂದಿದೆ. ಮಹತ್ತರವಾದ ಕಾರ್ಬೋಸ್ಯಾಟ್-1 ಒಂದೇ ಭೂಪ್ರದೇಶವನ್ನು ಎರಡು ಪ್ರತ್ಯೇಕ ಕೋನಗಳಿಂದ ಬಹುಮಟ್ಟಿಗೆ ಏಕಕಾಲದಲ್ಲಿ ವೀಕ್ಷಿಸುವ ಮೂಲಕ ಮೂರು ಆಯಾಮಗಳನ್ನು (ತ್ರೀಡಿ) ತೋರಿಸುವ ಚಿತ್ರಗಳನ್ನು ತೆಗೆಯುವ ಸಾಮಥ್ರ್ಯವನ್ನು ಹೊಂದಿದೆ.

	ಗಾತ್ರದಲ್ಲಿ ಚಿಕ್ಕದಾಗಿದ್ದರೂ ಭೂಮಿಯ ಚಿತ್ರಗಳನ್ನು ಸ್ಪಷ್ಟವಾಗಿ ತೆರೆಯುವಲ್ಲಿ ಕಾರ್ಬೋಸ್ಯಾಟ್-1, ಹಗಲೂ ರಾತ್ರಿ ಚಿತ್ರ ತೆಗೆಯಬಲ್ಲ ರೇಡಾರ್‍ಸ್ಯಾಟ್ ಹಾಗೂ ಸಂಪನ್ಮೂಲಗಳ ಹಾಗೂ ಸಾಗರಗಳ ಸಮೀಕ್ಷೆ ನಡೆಸುವ ರಿಸೋರ್ಸ್‍ಸ್ಯಾಟ್-2 ಮತ್ತು ಓಷನ್‍ಸ್ಯಾಟ್ ಇವು ಐಆರ್‍ಎಸ್ ಸರಣಿಯಲ್ಲಿ ಬರುವ ಮುಂದಿನ ಉಪಗ್ರಹಗಳಾಗಿವೆ.

	ದೂರಸಂವೇದಿ ಉಪಗ್ರಹಗಳಿಂದ ಬಂದ ಚಿತ್ರರೂಪದ ಮಾಹಿತಿಯನ್ನು ರಾಷ್ಟ್ರೀಯ ಅಭಿವೃದ್ಧಿಗೆ ಸಂಬಂಧಿಸಿದ ಅನೇಕ ಕಾರ್ಯಗಳಿಗಾಗಿ ಬಳಸಿಕೊಳ್ಳಬಹುದು. ಇಂದು ಅ ಮಾಹಿತಿಯನ್ನು ಬೆಳೆಗಳ ಎಕರೆಯ ಪ್ರದೇಶ ಹಾಗೂ ಇಳುವರಿಯನ್ನು ಅಂದಾಜು ಮಾಡಲು ಬಳಸಿಕೊಳ್ಳಲಾಗುತ್ತಿದೆ; ಅನೇಕ ರಾಜ್ಯಗಳಲ್ಲಿ ಕೊಳವೆಬಾವಿಗಳನ್ನು ತೋಡಲು ಸೂಕ್ತವಾದ ಸ್ಥಳಗಳನ್ನು ಗುರುತಿಸಲು ಆ ಮಾಹಿತಿಯನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗಿದೆ; ನಮ್ಮ ಅರಣ್ಯಸಂಪತ್ತನ್ನು ಅಳೆಯಲು ಹಾಗೂ ಕಾಡ್ಕಿಚ್ಚಿನಿಂದ ನಾಶವಾದ ಪ್ರದೇಶಗಳನ್ನು ಅಂದಾಜು ಮಾಡಲು ಉಪಯೋಗಿಸಿಕೊಳ್ಳಲಾಗುತ್ತಿದೆ. ಜೀವವೈವಿಧ್ಯವನ್ನು ದಾಖಲಿಸಲು ಅದರ ನೆರವನ್ನು ಪಡೆಯಲಾಗುತ್ತಿದೆ. ಕೆಲ ಬಗೆಯ ಪ್ರಕೃತಿ ವಿಕೋಪಗಳಿಗೆ ಒಳಗಾಗಿರುವ ಪ್ರದೇಶಗಳನ್ನು ಗುರುತಿಸಲು ಹಾಗೂ ಪ್ರಕೃತಿ ವಿಕೋಪಗಳಿಂದ ಉಂಟಾದ ನಷ್ಟವನ್ನು ಅಂದಾಜು ಮಾಡಲೂ ನಮ್ಮ ದೂರಸಂವೇದಿ ಉಪಗ್ರಹಗಳು ಕಳುಹಿಸಿದ ಚಿತ್ರಗಳು ಬಳಕೆಗೆ ಬರುತ್ತಿವೆ.

	ಇಂದು ನಮ್ಮ ಐಆರ್‍ಎಸ್ ಸರಣಿಯ ದೂರಸಂವೇದಿ ಉಪಗ್ರಹಗಳು ಕಳುಹಿಸುವ ಚಿತ್ರಗಳು ಅಮೆರಿಕವೂ ಸೇರಿದಂತೆ ಜಗತ್ತಿನ ವಿವಿದೆಡೆಯಲ್ಲಿನ ಅನೇಕ ದೇಶಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದು ಭಾರತ ಇಂದು ಸಾಧಿಸುವ ತಾಂತ್ರಿಕ ಪ್ರಗತಿಗೆ ಕೈಗನ್ನಡಿಯಾಗಿದೆ.

ಪಿಎಸ್‍ಎಸಲ್‍ವಿ : 

	ಭಾರತ ಇಂದು ಸ್ಥಾಪಿಸಿರುವ ನಾಲ್ಕು ಅಂತರಿಕ್ಷ ವ್ಯವಸ್ಥೆಗಳ ಪೈಕಿ ಒಂದಾದ ಪಿಎಸ್‍ಎಲ್‍ವಿ ಜಾಗತಿಕ ಮಟ್ಟದಲ್ಲಿ ಲಭ್ಯವಿರುವ ಒಂದು ಬೃಹತ್ ಉಪಗ್ರಹ ಉಡಾವಣಾ ವಾಹನವಾಗಿದೆ. 1993 ಹಾಗೂ 2005ರ ನಡುವಿನ 12 ವರ್ಷಗಳ ಅವಧಿಯಲ್ಲಿ ಒಂಭತ್ತು ಬಾರಿ ಉಡಾಯಿಸಲಾದ ಈ ರಾಕೆಟ್ಟು ಕಳೆದ ಎರಡು ಯಾನಗಳಲ್ಲಿ ಸತತವಾದ ಯಶಸ್ಸನ್ನು ಕಂಡಿದೆ. ಆ ನಡುವೆ ಅದು ಹದಿಮೂರು ಉಪಗ್ರಹಗಳನ್ನು ಉಡಾಯಿಸಿದೆ. ಅವುಗಳಲ್ಲಿ ನಾಲ್ಕು ಜರ್ಮನಿ ದಕ್ಷಿಣ ಕೊರಿಯಾ ಮತ್ತು ಬೆಲ್ಜಿಯಂಗಳಿಗೆ ಸೇರಿದ ಉಪಗ್ರಹಗಳಾಗಿವೆ. ಒಂದಕ್ಕಿಂತ ಹೆಚ್ಚು ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾಯಿಸಿರುವ ಪಿಎಸ್‍ಎಲ್‍ವಿ ಇಂದು ಇಸ್ರೋದ ಕಾರ್ಯಾಶ್ವವಾಗಿದೆ. ಇದನ್ನೇ ಚಂದ್ರನ ಸುತ್ತ ಸುತ್ತುವ ಮೂಲಕ ಆ ಆಕಾಶಕಾಯವನ್ನು ಅನ್ವೇಷಿಸುವ ಉದ್ದೇಶ ಹೊಂದಿರುವ ತನ್ನ `ಚಂದ್ರಯಾನ-1 ರೋಬಾಟ್ ನೌಕೆಯನ್ನು ಉಡಾಯಿಸಲು `ಇಸ್ರೋ ನಿರ್ಧರಿಸಿದೆ. ಪಿಎಸ್‍ಎಲ್‍ವಿ ಎಂಬುದು ಧೃವಗಳ ಮೇಲೆ ಹಾದುಹೋಗುವ ಕಕ್ಷೆಗೆ ಸೇರಬೇಕಾದ ಉಪಗ್ರಹ ಉಡಾವಣಾ ವಾಹನ ಎಂಬ ಅರ್ಥ ಬರುವ ಇಂಗ್ಲಿಷ್ ಪದಗಳ ಪ್ರಥಮಾಕ್ಷರಿ.

	ಪಿಎಸ್‍ಎಲ್‍ವಿ ದ್ರವ ನೋದನಕಾರಿಗಳನ್ನು (ಪ್ರೊಪೆಲೆಂಟ್ಸ್) ಬಳಸುವ ರಾಕೆಟ್ ಹಂತಗಳನ್ನು ಉಳ್ಳ ಭಾರತದ ಪ್ರಥಮ ಉಪಗ್ರಹ ಉಡಾವಣ ವಾಹನ, ಅದಕ್ಕೆ ಮೊದಲಿನ ಭಾರತದ ಎಸ್‍ಎಲ್‍ವಿ-3 ಮತ್ತು ಎಎಸ್‍ಎಲ್‍ವಿ ಉಡಾವಣಾ ವಾಹನಗಳು ಘನನೋದನಕಾರಿಗಳನ್ನು ಬಳಸುವ ರಾಕೆಟ್ ಹಂತಗಳನ್ನು ಮಾತ್ರ ಹೊಂದಿದ್ದವು. ದ್ರವ ನೋದನಕಾರಿ ರಾಕೆಟ್ ಹಂತಗಳು ಘನ ನೋದನಕಾರಿಗಳನ್ನು ಬಳಸುವ ರಾಕೆಟ್ ಹಂತಗಳಿಗಿಂತ ಹೆಚ್ಚು ದಕ್ಷತೆಯನ್ನು ಹೊಂದಿರುತ್ತವೆ. ಪಿಎಸ್‍ಎಲ್‍ವಿ ಯ ಮೊದಲ ಹಾಗೂ ಮೂರನೆ ಹಂತಗಳು ಮತ್ತು ಮೊದಲ ಹಂತವನ್ನು ಅಪ್ಪಿ ಹಿಡಿದಿರುವ ಆರು `ಸ್ಟ್ರಾಪ್ ಆನ್ ಮೋಟಾರ್ ಗಳು ಘನ ನೋದನಕಾರಿಗಳನ್ನು ಬಳಸುತ್ತೇವೆ. ಇದಕ್ಕೆ ಬದಲಾಗಿ ಆ ರಾಕೆಟ್‍ನ ಎರಡು ಹಾಗೂ ನಾಲ್ಕನೇ ಹಂತಗಳು ದ್ರವ ನೋದನಕಾರಿ ರಾಕೆಟ್ ಹಂತಗಳಾಗಿವೆ. 

	ಮೊದಲಿಗೆ ಪಿಎಸ್‍ಎಲ್‍ವಿ ಯನ್ನು ಸುಮಾರು 800 ಕಿ.ಗ್ರಾಂ. ತೂಕದ ಉಪಗ್ರಹವೊಂದನ್ನು 900 ಕಿ.ಮೀ. ಎತ್ತರದ `ಸೌರಮೇಳಯಕ (ಸನ್ ಸಿಂಕ್ರೊನಸ್-ಎಂದರೆ ದೀರ್ಘಕಾಲದ ಭೂವೀಕ್ಷಣೆಗೆ ಅನುವಾಗುವ) ಕಕ್ಷೆಯೊಂದಕ್ಕೆ ಹಾರಿಬಿಡುವ ಉದ್ದೇಶದಿಂದ ನಿರ್ಮಿಸಲಾಯಿತು. ಕಾಲಕಳೆದಂತೆ ಅದನ್ನು ಸೂಕ್ತವಾಗಿ ಅಭಿವೃದ್ಧಿಪಡಿಸುವ ಮೂಲಕ ಅದರ ಸಾಮಥ್ರ್ಯವನ್ನು ಹೆಚ್ಚಿಸಲಾಗಿ ಇಂದು ಆ ಬೃಹತ್ ರಾಕೆಟ್ಟು ಸುಮಾರು 1,600 ಕಿ.ಗ್ರಾಂ. ತೂಕದ ಉಪಗ್ರಹವೊಂದನ್ನು 600 ಕಿ.ಮೀ. ಎತ್ತರದ ಸೌರಹಿಂಬಾಲಿಕ ಕಕ್ಷೆಗೆ ಹಾರಿಬಿಡಬಲ್ಲದಾಗಿದೆ. 44 ಮೀ. (145 ಅಡಿ ಅಂದರೆ ಸುಮಾರು ಹದಿನೈದು ಮಹಡಿಗಳಷ್ಟು) ಎತ್ತರದ ಪಿಎಸ್‍ಎಲ್‍ವಿ 295 ಟನ್ ತೂಕವಿದೆ. ಇದರ ಅತ್ಯಾಧುನಿಕ ಕಂಪ್ಯೂಟರ್ ಮಿದುಳು ತಾನು ಹೊತ್ತ ಉಪಗ್ರಹವನ್ನು ದಕ್ಷವಾಗಿ ನಿಖರವಾದ ಕಕ್ಷೆಗೆ ಹಾರಿಬಿಡಬಲ್ಲದಾಗಿದೆ.

	ಪಿಎಸ್‍ಎಲ್‍ವಿ ಉಪಗ್ರಹಗಳನ್ನು ಸಾಮಾನ್ಯವಾಗಿ ಸೌರಮೇಳಯಾನ ಕಕ್ಷೆಗೆ ಹಾರಿಬಿಡುವುದರೊಂದಿಗೇ ಕಲ್ಪನಾ-1 ಎಂಬ ಹವಾಮನ ವೀಕ್ಷಣಾ ಉಪಗ್ರಹವನ್ನು ಭೂಸ್ಥಿರಕಕ್ಷೆಗೆ ದಕ್ಷವಾಗಿ ತಲುಪಿಸಲು ಅನುವಾಗುವ `ಭೂಸ್ಥಿರ ವರ್ಗಾವಣ ಕಕ್ಷೆಗೆ ಹಾರಿಬಿಟ್ಟಿದೆ. ಈ ರಾಕೆಟ್ಟು 2007-08ರ ಸುಮಾರಿನಲ್ಲಿ `ಚಂದ್ರಯಾನ-1' ರೋಬಾಟ್ ನೌಕೆಯನ್ನು ಹಾರಿಬಿಡಲಿದೆ. ಪಿಎಸ್‍ಎಲ್‍ವಿ ಯನ್ನು ಮತ್ತಷ್ಟು ಪರಿಷ್ಕರಿಸುವ ಮೂಲಕ ಅದರ ಉಪಗ್ರಹ ಉಡಾವಣಾ ಸಾಮಥ್ರ್ಯವನ್ನು ಮತ್ತಷ್ಟು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ.

ಜಿಎಸ್‍ಎಲ್‍ವಿ : 

	ಭಾರತದ ನಾಲ್ಕನೆಯ ಪೀಳಿಗೆಯ ಉಪಗ್ರಹ ಉಡಾವಣಾ ವಾಹನವಾದ ಜಿಎಸ್‍ಎಲ್‍ವಿ ರಾಸಾಯನಿಕ ರಾಕೆಟ್ ಯಂತ್ರಗಳ ಪೈಕಿ ಅತ್ಯಂತ ದಕ್ಷವಾದ `'ಕ್ರಯೋಜನಿಕ್ ಯಂತ್ರವನ್ನು ಬಳಸುವ ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನ ಎಂಬುದು ಅದರ ವೈಶಿಷ್ಟ್ಯವಾಗಿದೆ. 2006ರ ಪ್ರಾರಂಭದ ಹೊತ್ತಿಗೆ ಜಿಎಸ್‍ಎಲ್‍ವಿ ಮೂರು ಬಾರಿ ಉಡಾಯಿಸಲ್ಪಟ್ಟಿದ್ದು ಆ ಮೂರು ಯಾನಗಳೂ ಯಶಸ್ವಿಯಾಗಿದ್ದವು. 2001ರ ಏಪ್ರಿಲ್ 18ರಂದು ಮೊದಲ ಬಾರಿ ಉಡಾಯಿಸಲ್ಪಟ್ಟ ಜಿಎಸ್‍ಎಲ್‍ವಿ 2000 ಕಿ.ಗ್ರಾಂ. ತೂಕದ ಉಪಗ್ರಹವೊಂದನ್ನು ಒಂದೆಡೆ 200 ಕಿ.ಮೀ. ಎತ್ತರದಿಂದ ಮತ್ತೊಂದೆಡೆ 36,000 ಕಿ.ಮೀ. ಎತ್ತರದವರೆಗೂ ವ್ಯಾಪಿಸಿರುವ `ಭೂಸ್ಥಿರ ವರ್ಗಾವಣಾ ಕಕ್ಷೆಗೆ ಹಾರಿಬಿಡಬಲ್ಲದಾಗಿದೆ. ಶಿಕ್ಷಣ ಕ್ಷೇತ್ರಕ್ಕಾಗಿಯೇ ಮುಡಿಪಾಗಿಡಲಾದ ಜಗತ್ತಿನ ಏಕೈಕ ಉಪಗ್ರಹವಾದ 1950 ಕಿ.ಗ್ರಾಂ. ತೂಕದ `ಎಜ್ಯುಸ್ಯಾಟ್ ಅನ್ನು 2004ರಲ್ಲಿ ಉಡಾಯಿಸಿದ ಹೆಗ್ಗಳಿಕೆ ಈ ಉಡಾವಣಾ ವಾಹನದ್ದಾಗಿದೆ.

	49 ಮೀ. ಅಂದರೆ ಹದಿನೈದು ಮಹಡಿಗಳಷ್ಟು ಎತ್ತರದ ಜಿಎಸ್‍ಎಲ್‍ವಿಯಲ್ಲಿ ಮೂರು ಹಂತಗಳಿವೆ. 44 ಟನ್ ತೂಕದ ಆ ರಾಕೆಟ್‍ನ ಮೊದಲ ಹಂತ ಘನ ನೋದನಕಾರಿಗಳನ್ನು ಬಳಸುವ ಪಿಎಸ್‍ಎಲ್‍ವಿ ಯ ಮೊದಲ ಹಂತವನ್ನೇ ಬಹುಮಟ್ಟಿಗೆ ಹೋಲುತ್ತದೆ. ಆ ಹಂತವನ್ನು ಅಪ್ಪಿರುವ ನಾಲ್ಕು ಸ್ಟ್ರಾಪ್ ಆನ್ ಮೋಟಾರುಗಳು ಹಾಗೂ ಜಿಎಸ್‍ಎಲ್‍ವಿ ಯ ಎರಡನೇ ಹಂತ, ಇವು ಪಿಎಸ್‍ಎಲ್‍ವಿ ಯ ಎರಡನೇ ಹಂತದಂತೆ ದ್ರವ ನೋದನಕಾರಿಗಳನ್ನು ಬಳಸುವ `ವಿಕಾಸ್ ರಾಕೆಟ್ ಯಂತ್ರವನ್ನು ಬಳಸುತ್ತೇವೆ. 

	ಜಿಎಸ್‍ಎಲ್‍ವಿ ಯ ಮೂರನೆಯ ಹಂತ ದ್ರವ ಹೈಡ್ರೋಜನ್ ಅನ್ನು ಇಂಧನವಾಗಿ ಹಾಗೂ ದ್ರವ ಆಕ್ಸಿಜನ್ ಅನ್ನು ದಹನಾನುಕೂಲಿಯಾಗಿ ಬಳಸುವ `ಕ್ರಯೋಜನಿಕ್ (ಅಂದರೆ ಕಡಿಮೆ ಉಷ್ಣತೆಯಲ್ಲಿ ಸಂಗ್ರಹಿಸಿಡಲಾದ ನೋದನಕಾರಿಗಳನ್ನು  ಬಳಸುವ) ಹಂತವಾಗಿದೆ. ಜಿಎಸ್‍ಎಲ್‍ವಿ ಯ ಮೊದಲ ಮೂರು ಯಾನಗಳಲ್ಲಿ ರಷ್ಯಾದಲ್ಲಿ ನಿರ್ಮಾಣವಾದ ಕ್ರಯೋಜನಿಕ್ ಹಂತವನ್ನು ಬಳಸಲಾಗಿದೆ. ಆದರೆ ನಮ್ಮದೇ ಆದ ದಕ್ಷ ಕ್ರಯೋಜನಿಕ್ ಹಂತವನ್ನು ನಿರ್ಮಿಸುವ ಪ್ರಯತ್ನ ಯಶಸ್ವಿಯಾಗಿ ಮುಂದೆ ಸಾಗುತ್ತಿದೆ.

	ಇದರೊಂದಿಗೆ `ಜಿಎಸ್‍ಎಲ್‍ವಿ-ಮಾರ್ಕ್ 3' ಎಂಬ ಇನ್ನೂ ಶಕ್ತಿಯುತವಾದ ಉಡಾವಣಾ ವಾಹನವನ್ನು `ಇಸ್ರೋ ವಿಜ್ಞಾನಿಗಳಿಂದು ನಿರ್ಮಿಸುತ್ತಿದ್ದಾರೆ. ಸುಮಾರು ನಾಲ್ಕು ಸಾವಿರ ಕಿ.ಗ್ರಾಂ. ತೂಕದ ಉಪಗ್ರಹವೊಂದನ್ನು `ಭೂಸ್ಥಿರ ವರ್ಗಾವಣಾ ಕಕ್ಷೆಗೆ ಹಾರಿಬಿಡುವ ಸಾಮಥ್ರ್ಯ ಇರುವಂತೆ ಅದನ್ನು ನಿರ್ಮಿಸಲಾಗುತ್ತಿದೆ. 43 ಮೀ. ಎತ್ತರದ ಜಿಎಸ್‍ಎಲ್‍ವಿ-ಮಾರ್ಕ್ 3 629 ಟನ್ ತೂಕವಿರುತ್ತದೆ. ಅದರ ಮೊದಲ ಹಂತ ದ್ರವ ನೋದನPಕಾರಿಗಳನ್ನು ಬಳಸುವುದಾಗಿದ್ದು ಅದನ್ನು ಘನನೋದನಕಾರಿಗಳನ್ನು ಬಳಸುವ ಎರಡು ಬೃಹತ್ `ಸ್ಟ್ರಾಪ್ ಆನ್ ಮೋಟಾರ್‍ಗಳು ಅಪ್ಪಿರುತ್ತವೆ. ಜಿಎಸ್‍ಎಲ್‍ವಿ-ಮಾರ್ಕ್ 3ದ ಎರಡನೇ ಹಂತ ಒಂದು `ಕ್ರಯೋಜನಿಕ್ ಹಂತವಾಗಿರುತ್ತದೆ.

	ಜಿಎಸ್‍ಎಲ್‍ವಿ-ಮಾರ್ಕ್ 3ದ ನಂತರ ಒಂದು ಮರುಪ್ರಯೋಗ ಉಡಾವಣಾ ವಾಹನವನ್ನು ನಿರ್ಮಿಸುವ ಬಗ್ಗೆ ಇಂದು ಅಧ್ಯಯನ ನಡೆಯುತ್ತಿದೆ.

ಅಂತರಿಕ್ಷ ವಿಜ್ಞಾನ ಕಾರ್ಯಕ್ರಮ : 

ಭಾರತದ ಅಂತರಿಕ್ಷ ಕಾರ್ಯಕ್ರಮದಲ್ಲಿ ಸ್ವದೇಶಿ ಅಂತರಿಕ್ಷ ತಂತ್ರಜ್ಞಾನವನ್ನು ದೇಶದ ತ್ವರಿತವಾದ ಅಭಿವೃದ್ಧಿಗೆ ಬಳಸಿಕೊಳ್ಳುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ ಈ ಕಾರಣದಿಂದಾಗಿ ಅಂತರಿಕ್ಷ ಸಂಶೋಧನೆಯೇನೂ ನಿರ್ಲಕ್ಷಿಸಲ್ಪಟ್ಟಿಲ್ಲ. ಅದಕ್ಕೆ ಬದಲಾಗಿ ಭಾರತದ ಅಂತರಿಕ್ಷ ಸಂಶೋಧನಾ ಕಾರ್ಯಕ್ರಮ ಸಾಕಷ್ಟು ಚಟುವಟಿಕೆಯಾಗಿದೆ.

	ಭಾರತದ ಪ್ರಥಮ ಉಪಗ್ರಹವಾದ ಆರ್ಯಭಟ ವೈಜ್ಞಾನಿಕ ಉಪಗ್ರಹವಾಗಿತ್ತು. ಆ ಬಳಿಕ `ಗ್ಯಾಮಾಕಿರಣ ಸ್ಪೋದನೆಗಳನ್ನು ಗುರುತಿಸಬಲ್ಲ ವೈಜ್ಞಾನಿಕ ಉಪಕರಣವೊಂದನ್ನು ಹಾಗೂ ಭೂವಾತಾವರಣದ ಅಯಾನುಮಂಡಲವನ್ನು ಅಧ್ಯಯನ ಮಾಡುವ ಉಪಕರಣಗಳನ್ನು ಹೊಂದಿದ್ದ ಸ್ರಾಸ್ ಸರಣಿಯ ಎರಡು ಉಪಗ್ರಹಗಳು ಸ್ವದೇಶಿ ಉಡಾವಣಾ ವಾಹನ ಎಎಸ್‍ಎಲ್‍ವಿ ಯಲ್ಲಿ 1992 ಹಾಗೂ 1996ರಲ್ಲಿ ಕ್ರಮವಾಗಿ ಕಕ್ಷೆಗೆ ತೆರಳಿದವು. ಆ ನಂತರ 1996ರಲ್ಲಿ ಉಡಾಯಿಸಲಾದ ಐಆರ್‍ಎಸ್-ಪಿ3 ಉಪಗ್ರಹ ದೂರದ ಆಕಾಶಕಾಯಗಳಿಂದ ಬರುವ ಕ್ಷ-ಕಿರಣಗಳನ್ನು ದಾಖಲಿಸಿಕೊಳ್ಳುವ ಉಪಕರಣಗಳನ್ನು ಹೊಂದಿತ್ತು. ಆ ಮೂಲಕ ನ್ಯೂಟ್ರಾನ್ ನಕ್ಷತ್ರ, ಕಪ್ಪು ರಂಧ್ರಗಳು ಮುಂತಾದ ಕುತೂಹಲಕಾರಿ ಆಕಾಶಕಾಯಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಪ್ರಯತ್ನ ಮಾಡಲಾಯಿತು.

	ಇಂದು ಭಾರತೀಯ ಅಂತರಿಕ್ಷ ವಿಜ್ಞಾನಿಗಳು ಚಂದ್ರನ ಬಗ್ಗೆ ಇನ್ನೂ ಹೆಚ್ಚು ಬೆಳಕು ಚೆಲ್ಲುವ ಚಂದ್ರಯಾನ-1 ಎಂಬ ಕಾರ್ಯಕ್ರಮದ ಮುನ್ನಡೆಯಲ್ಲಿ ನಿರತರಾಗಿದ್ದಾರೆ. 1200 ಕಿ.ಗ್ರಾಂ. ತೂಕದ ಚಂದ್ರಯಾನ-1 ನೌಕೆಯನ್ನು ಪಿಎಸ್‍ಎಲ್‍ವಿ ಯಲ್ಲಿ ದೀರ್ಘವೃತ್ತಾಕಾರದ ಭೂಕಕ್ಷೆಯೊಂದಕ್ಕೆ ಉಡಾಯಿಸಿದ ನಂತರ ಆ ನೌಕೆಯಲ್ಲೇ ಇರುವ ರಾಕೆಟ್ ಒಂದರ ನೆರವಿನೊಡನೆ ಅದನ್ನು ಭೂಮಿಯಿಂದ ಸುಮಾರು ನಾಲ್ಕು ಲಕ್ಷ ಕಿ.ಮೀ. ದೂರದಲ್ಲಿರುವ ಚಂದ್ರನ ಸಮೀಪಕ್ಕೆ ಕಳುಹಿಸಲಾಗುವುದು. ಅಲ್ಲಿ ಆ ರಾಕೆಟ್ ಯಂತ್ರವನ್ನು ಮತ್ತೆ ಉರಿಸುವ ಮೂಲಕ ಆ ನೌಕೆ ಚಂದ್ರನನ್ನು ಸುತ್ತುವಂತೆ ಮಾಡಲಾಗುವುದು. ನಂತರ ಆ ನೌಕೆ ಚಂದ್ರನ ಮೇಲ್ಮೈಯಿಂದ ಆ ಆಕಾಶಕಾಯವನ್ನು ಸುತ್ತುವ ಎತ್ತರವನ್ನು ಹಂತಹಂತವಾಗಿ ಕಡಿಮೆಮಾಡಿ ಕೊನೆಗೆ ಅದು ಸುಮಾರು ನೂರು ಕಿ.ಮೀ. ಎತ್ತರದ ಕಕ್ಷೆಯಲ್ಲಿ ಚಂದ್ರನನ್ನು ಸುತ್ತುವಂತೆ ಮಾಡಲಾಗುವುದು. ಚಂದ್ರಯಾನ-1 ನೌಕೆಯಲ್ಲಿ ಹನ್ನೊಂದು ವೈಜ್ಞಾನಿಕ ಉಪಕರಣಗಳಿದ್ದು ಆ ಪೈಕಿ ಐದು ಭಾರತದಲ್ಲಿ ನಿರ್ಮಾಣವಾದರೆ, ತಲಾ ಒಂದೊಂದು ಬ್ರಿಟನ್, ಜರ್ಮನಿ, ಸ್ವೀಡನ್ ಬಲ್ಗೇರಿಯಾಗಳಲ್ಲಿ ಮತ್ತು ಎರಡು ಅಮೆರಿಕಾದಲ್ಲಿ ನಿರ್ಮಾಣವಾಗುತ್ತಿವೆ. ಹೀಗೆ ತನ್ನ ಅಂತರಿಕ್ಷ ನೌಕೆಯಲ್ಲಿ ಉಪಕರಣಗಳನ್ನು ಚಂದ್ರನಲ್ಲಿಗೆ ಕಳುಹಿಸುವ ಅವಕಾಶವನ್ನು ಭಾರತ ಅಂತರರಾಷ್ಟ್ರೀಯ ವೈಜ್ಞಾನಿಕ ಸಮೂಹಕ್ಕೆ ನೀಡಿದೆ. ತನ್ನ ವೈಜ್ಞಾನಿಕ ಉಪಕರಣಗಳ ನೆರವಿನೊಡನೆ ಚಂದ್ರಯಾನ-1 ನೌಕೆ ಸುಮಾರು ಎರಡು ವರ್ಷಗಳ ಕಾಲ ಚಂದ್ರನ ಅನ್ವೇಷಣೆ ನಡೆಸಲಿದೆ.

	ಭಾರತ ಇಂದು ಕೈಗೆತ್ತಿಕೊಂಡಿರುವ ಅಂತರಿಕ್ಷ ವಿಜ್ಞಾನ ಕಾರ್ಯಕ್ರಮ ಅಸ್ಟ್ರೋಸ್ಯಾಟ್ ಆಗಿದೆ. ಇದು ದೃಗ್ಗೋಚರ ಬೆಳಕು, ಅತಿನೇರಿಳೆ ಕಿರಣಗಳು, ಮತ್ತು ಕ್ಷ-ಕಿರಣಗಳನ್ನು ಗುರುತಿಸಿ ದಾಖಲು ಮಾಡಿಕೊಳ್ಳುವ ವೈಜ್ಞಾನಿಕ ಉಪಕರಣಗಳನ್ನು ಉಳ್ಳ ಒಂದು ವೈಜ್ಞಾನಿಕ ಉಪಗ್ರಹವಾಗಿದೆ. ಇದನ್ನು 2008ರ ಸುಮಾರಿನಲ್ಲಿ ಪಿಎಸ್‍ಎಲ್‍ವಿ ಯ ನೆರವಿನೊಡನೆ ಭೂಕಕ್ಷೆಯೊಂದಕ್ಕೆ ಉಡಾಯಿಸಲಾಗುವುದು.

	ಇಂದು ಅಂತರಿಕ್ಷ ಸಂಶೋಧನೆಯಲ್ಲಿ ನಿರತವಾಗಿರುವ ಭಾರತ ಸರ್ಕಾರದ ಅಂತರಿಕ್ಷ ವಿಭಾಗದ ಸಂಸ್ಥೆಗಳಂತೆ ಅಹ್ಮದಾಬಾದಿನ ಭೌತಿಕ ಸಂಶೋಧನಾ ಪ್ರಯೋಗಶಾಲೆ, ವಿಕ್ರಂ ಸಾರಾಭಾಯಿ ಅಂತರಿಕ್ಷ ಕೇಂದ್ರದ ಅಂತರಿಕ್ಷ ಭೌತಶಾಸ್ತ್ರ ಪ್ರಯೋಗಶಾಲೆ (ಎಸ್‍ಪಿಎಲ್) ಮತ್ತು ಇಸ್ರೋ ಉಪಗ್ರಹ ಕೇಂದ್ರ, ಇವುಗಳಿವೆ.

	ಭಾರತದ ಅಂತರಿಕ್ಷ ಕಾರ್ಯಕ್ರಮದಲ್ಲಿ ಸ್ವದೇಶಿ ಅಂತರಿಕ್ಷ ತಂತ್ರಜ್ಞಾನದ ಬೆಳೆವಣಿಗೆಗೆ ಪ್ರಾಮುಖ್ಯ ನೀಡಲಾಗಿರುವುದರಿಂದ ಈ ಸಂಬಂಧದಲ್ಲಿ ಇಸ್ರೋ ಸಾರ್ವಜನಿಕ ಹಾಗೂ ಖಾಸಗಿ ಕ್ಷೇತ್ರಗಳೆರಡರ ನಮ್ಮ ಕೈಗಾರಿಕೆಗಳನ್ನು ಈ ಸಂದರ್ಭದಲ್ಲಿ ಬಳಸಿಕೊಂಡಿದೆ. ಇದರಿಂದಾಗಿ ಆ ಕೈಗಾರಿಕೆಗಳು ಪ್ರಗತಿ ಹೊಂದುವುದರೊಂದಿಗೇ ಹೊಸ ಹೊಸ ಸವಾಲುಗಳನ್ನು ಸ್ವೀಕರಿಸಿ ಅವುಗಳನ್ನು ಎದುರಿಸುವ ಬಗ್ಗೆ ಆತ್ಮವಿಶ್ವಾಸ ತಳೆಯುವಂತಾಗಿದೆ.

	ಅಂತೆಯೇ ಇಂದು ಅಂತರಿಕ್ಷ ವಿಭಾಗದ ವಾಣಿಜ್ಯಾತ್ಮಕ ಅಂಗವಾದ `ಆ್ಯಂಟ್ರಿಕ್ಸ್ ಸಂಸ್ಥೆ ಭಾರತದ ಅಂತರಿಕ್ಷ ಸಾಮಥ್ರ್ಯವನ್ನು  ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾದ ಬೆಲೆಗೆ ಒದಗಿಸುವಲ್ಲಿ ನಿರತವಾಗಿದೆ. ಆ್ಯಂಟ್ರಿಕ್ ಈಗಾಗಲೇ ನಾಲ್ಕು ವಿದೇಶಿ ಉಪಗ್ರಹಗಳನ್ನು ಪಿಎಸ್‍ಎಲ್‍ವಿ ಉಡಾಯಿಸುವಲ್ಲಿ, ಇನ್ಸಾಟ್-2ಇ ಉಪಗ್ರಹದ ಸಂಪರ್ಕ ಟ್ರಾನ್ಸ್‍ಪಾಂಡರ್‍ಗಳನ್ನು ಪ್ರತಿಷ್ಠಿತ ಇಂಟೆಲ್ಯಾಟ್ ಸಂಸ್ಥೆ ಗುತ್ತಿಗೆ ಪಡೆಯುವಲ್ಲಿ, ನಮ್ಮ ಎಆರ್‍ಎಸ್ ಉಪಗ್ರಹಗಳು ಕಳುಹಿಸುವ ಚಿತ್ರಗಳನ್ನು ಜಾಗತಿಕ ಮಟ್ಟದಲ್ಲಿ ಮಾರಾಟ ಮಾಡುವಲ್ಲಿ, ಉಪಗ್ರಹದ ಕೆಲವು ಉಪ ಅಂಗಗಳು ಭಾರತದಿಂದ ರಫ್ತಾಗುವಲ್ಲಿ, ವಿದೇಶಿ ಇಂಜಿನಿಯರ್‍ಗಳಿಗೆ ಭಾರತದಲ್ಲಿ ತರಬೇತಿ ಒದಗುವಲ್ಲಿ ಮುಖ್ಯವಾದ ಪಾತ್ರ ವಹಿಸಿದೆ. ಭವಿಷ್ಯದಲ್ಲಿ ಭಾರತ ಸಿಂಗಾಪುರ ಹಾಗೂ ಇಟಲಿಗಳಿಗೆ ಸೇರಿದ ಉಪಗ್ರಹಗಳನ್ನು ಉಡಾಯಿಸಲಿದೆ; ಯೂರೋಪಿನ ಪ್ರತಿಷ್ಠಿತ ಉಪಗ್ರಹ ನಿರ್ಮಾಣ ಸಂಸ್ಥೆಯಾದ `ಅ್ಯಸ್ಟ್ರಿಯಂ'ನ ಸಹಯೋಗದೊಂದಿಗೆ ಯೂರೋಪಿನ ಸಂಪರ್ಕ ಸಂಸ್ಥೆಯ ಉಪಗ್ರಹವೊಂದನ್ನು ನಿರ್ಮಿಸಲೂ ಇಂದು ಸಜ್ಜಾಗುತ್ತಿದೆ.

	ತನ್ನ ಅಂತರಿಕ್ಷ ಕಾರ್ಯಕ್ರಮದ ಪ್ರಾರಂಭದ ದಿನಗಳಲ್ಲಿ ಅಂತರರಾಷ್ಟ್ರೀಯ ಸಹಕಾರ ಭಾರತಕ್ಕೆ ಬಹಳ ಅನುಕೂಲಕರವಾಗಿ ಪರಿಣಮಿಸಿತು. ಇದೀಗ ಅಂತರಿಕ್ಷ ಕ್ಷೇತ್ರದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿ ಬೆಳೆದು ನಿಂತಿರುವ ಭಾರತ ಅಂತರರಾಷ್ಟ್ರೀಯ ಸಹಕಾರವನ್ನು ಕಡೆಗಣಿಸಿಲ್ಲ. ಅದಕ್ಕೆ ಬದಲಾಗಿ ಆ ವಿಷಯಕ್ಕೆ ಅದು ಸಾಕಷ್ಟು ಪ್ರಾಮುಖ್ಯವನ್ನು ನೀಡಿದೆ. (ಜರ್ಮನಿಯ ಕ್ಯಾಮೆರಾ ಒಂದನ್ನು ಹೊತ್ತ) ಐಆರ್‍ಎಸ್-ಪಿ 3, ಚಂದ್ರಯಾನ-1, ಅಸ್ಟ್ರೋಸ್ಯಾಟ್, ಜಿಸ್ಯಾಟ್-4, ಫ್ರೌನ್ಸ್‍ನ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಹವಾಗುಣ ಸಂಶೋಧನಾ ಉಪಗ್ರಹ ಮೇಘಾ ಟ್ರಾಫಿಕ್ಸ್. ಇದಕ್ಕೆ ಉತ್ತಮ ಉದಾಹರಣೆಯಾಗಿವೆ. 

	ಅಂತೂ ಭಾರತ ಇಂದು ಅಂತರಿಕ್ಷ ಕ್ಷೇತ್ರದಲ್ಲಿನ ಒಂದು ಬಲಿಷ್ಠ ರಾಷ್ಟ್ರವಾಗಿದೆ ಎಂಬುದು ಅತಿಶಯೋಕ್ತಿಯೇನಲ್ಲ.							     					
(ಯು.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 (ಪರಿಷ್ಕರಣೆ: ಬಿ.ಗುರುಪ್ರಸಾದ್)